Monday, May 6, 2024

6/5/2024 ಇವತ್ತಿನ ಸಂತಸದ ಸುದ್ದಿ

 

ಸಂತಸದ ಸುದ್ದಿ

ಇವತ್ತು ಒಂದು ಸಂತಸದ ಸುದ್ದಿ ಇದೆ. ದೇವರು ನಿಜವಾಗಲೂ ಇದ್ದೇನೆಂದು ಅದೆಷ್ಟು ಬಾರಿ ಸಾಬೀತುಪಡಿಸ್ತಾನೆ ಅಂತ ಆಶ್ಚರ್ಯ ಆಗುತ್ತದೆ.

ಇವತ್ತು ಸಂಜೆ ೫.೪೫ ರ ಸಮಯ. ಕಾಲೇಜಿನಲ್ಲಿ ಇನ್ನೇನು ನಾನು ನನ್ನ ಕಂಪ್ಯೂಟರ್ ಶಟ್ ಡೌನ್ ಮಾಡಿ ಬ್ಯಾಗಿಗೆ ತುಂಬಿಸುವುದರಲ್ಲಿದ್ದೆ. ಆಗ ನಮ್ಮ ಪ್ರೊ.ಚಂದ್ರಕಾಂತ ಭಟ್ಟರು ನಮ್ಮ ವಿಭಾಗದ ಒಳಗೆ ಬಂದರು. ಒಂದು ಲವ್ ಲೆಟರ್ ನ ಸುದ್ದಿ ಇದೆ. ಗೊತ್ತಾಗಿದೆಯಾ ಅಂತ ಕೇಳಿದರು. ನಾನು ಊಹೆ ಮಾಡಿದ್ದು ಪ್ರಾಯಶಃ ಅದೇ ಸುಬ್ರಾಯ ಭಟ್ಟರ ಏನೋ ವಿಚಾರ ಇರಬಹುದು ಅಂತ. ನಾನು ಗೊತ್ತಿಲ್ಲ ಅಂದೆ.

ನಮ್ಮ ಕ್ಯಾಂಪಸ್ ಡೈರೆಕ್ಟರ್ ಪ್ರೊ. ಹಂಸಧರ ಝಾ ಹೇಳಿದರು ಅಂತ ಅವ್ರು ಆರಂಭಿಸಿದ್ರು – ಒಂದು ಲೆಟರ್ ಆರ್ಡಿನರಿ ಪೋಸ್ಟ್ ನಲ್ಲಿ ಶೃಂಗೇರಿಯ ಪೋಸ್ಟ್ ಡಬ್ಬಿಗೆ ಯಾರೋ ಹಾಕಿದ್ರು. ಪೋಸ್ಟ್ ಮ್ಯಾನ್ ಆ ಪೋಸ್ಟ್ ಡಬ್ಬಿಯನ್ನು ಓಪನ್ ಮಾಡಿದಾಗ ಸ್ಟಾಂಪ್ ಇಲ್ಲದ ಪತ್ರ ಸಿಕ್ಕಿತು. ಅದರಲ್ಲಿ ಫ್ರಮ್ ಅಡ್ರೆಸ್ ಇರಲಿಲ್ಲ. ಟು ಅಡ್ರೆಸ್ ಇತ್ತು. ಅದು ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶ್ರೀನಿವಾಸ ವರಖೇಡಿಯವರಿಗೆ(ಡಿಲ್ಲಿಗೆ) ಬರೆದ ಪತ್ರವಾಗಿತ್ತು. ಪೋಸ್ಟ್ ಮ್ಯಾನ್ ಸ್ಟಾಂಪ್ ಇಲ್ಲದ ಪತ್ರ ನಮ್ಮ ಕಾಲೆಜಿನದ್ದೇ ಅಂತ ಊಹಿಸಿ ಕಾಲೇಜಿನ ಆಫೀಸಿಗೆ ತಂದು ಕೊಟ್ಟು ಸ್ಟಾಂಪ್ ಹಚ್ಚಿ ಕೊಡಲು ಹೇಳಿದ. ಗುರುರಾಜ ಭಟ್ಟರು “ಕುಲಪತಿಗಳಿಗೆ ಇಂತಹ ಯಾವುದೇ ಪತ್ರ ಆರ್ಡಿನರಿ ಪೋಸ್ಟ್ ನಲ್ಲಿ  ಇಲ್ಲಿಂದ ಕಳುಹಿಸುವುದಿಲ್ಲ” ಎಂದು ಚಕಿತರಾಗಿ ಅದನ್ನು ನನ್ನ(ಡೈರಕ್ಟರ್ ರವರ) ಗಮನಕ್ಕೆ ತಂದಾಗ, ಹಾಗಾದ್ರೆ ಅದರಲ್ಲಿ ಯಾರು ಏನು ಬರೆದಿರಬಹುದು ಎಂದು ಒಂದು ಸಲ ಪರಿಶೀಲಿಸಬೇಕು ಎಂಬುದಾಗಿ ತೆರೆದು ನೋಡಿದಾಗ ಸ್ಪಸ್ಟ ಆಯಿತು – ಇದು ಅದೇ ಮನುಷ್ಯನ ಕಿತಾಪತಿ ಅಂತ. ಅದರಲ್ಲಿ ಹೀಗೆಲ್ಲಾ ಬರೆದಿತ್ತು -  ಬಿಹಾರಿ ಡೈರೆಕ್ಟರ್ ಬಂದಾಗಿನಿಂದ ಇಲ್ಲಿ ಯಾವುದೇ ರೀತಿಯ ವ್ಯವಸ್ಥಿತ ಅಡ್ಮಿನಿಸ್ಟ್ರೇಶನ್ ಇಲ್ಲ. ಎಲ್ಲರೂ ಸಂತೆಯ ತರಹ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರಂತೂ ಬಂದು ಸೈನ್ ಮಾಡಿ ಪೇಟೆ ಕಡೆಗೆ ವೈಯಕ್ತಿಕ ಕೆಲಸಗಳಿಗೆ ಹೋಗುತ್ತಾರೆ. ಒಬ್ಬನಂತೂ ಸೈನ್ ಮಾಡಿದ ತಕ್ಷಣ ಫುರ್ ಅಂತ ಬೈಕ್ ಸ್ಟಾರ್ಟ್ ಮಾಡಿ ಓಡಿ ಹೋಗ್ತಾನೆ. ಇನ್ನೊಬ್ಬ ಆರೋಗ್ಯ ಸರಿಯಿದ್ದರೂ ಮೆಡಿಕಲ್ ಲೀವ್ ಹಾಕಿ ಪೌರೊಹಿತ್ಯ ಮಾಡ್ತಾನೆ. ಕುಲಪತಿಗಳೂ ಸರಿಯಿಲ್ಲ. ಯಾರ್ಯಾರಿಗೋ ಶಿಕ್ಷಾವಿಭೂಷಣ ಎಂಬ ಬಿರುದು ಕೊಡ್ತಾರೆ. ಅದು ವಿಭೂಷಣವೋ ವಿಭೀಷಣವೋ ? ಇಲ್ಲಿ ನ್ಯಾಕ್ ಗಾಗಿ ಎಸ್ಟೆಸ್ಟೋ ಕೆಲಸ ಮಾಡಿದವರಿಗೆ ಏನೂ ಸನ್ಮಾನ ಇಲ್ಲ. ಪುರಸ್ಕಾರವೂ ಇಲ್ಲ ಇತ್ಯಾದಿ ಇತ್ಯಾದಿ.

ಆ ಕಾಗದವನ್ನು ಹಿಂದಿಯಲ್ಲಿ ಬರೆದಿದ್ದರು. ಅದರ ಭಾಷೆಯಿಂದಲೇ ಸ್ಪಷ್ಟವಾಗುವುದು ಏನೆಂದರೆ ಇದನ್ನು ಯಾವನೋ ಒಬ್ಬ ಹಿಂದಿ ಮಾತೃಭಾಷೆಯಲ್ಲದವ ಬರೆದದ್ದು ಎಂದು. ಅದರಲ್ಲಿ ಕೊನೆಗೆ ಶಿಕ್ಷಾವಿಭೂಷಣದ ಬಗ್ಗೆ ಆಕ್ಷೇಪ ಎತ್ತಿದ್ದೇ ಅದನ್ನು ಪಡೆದವರೋ ಅವರ ಒಡನಾಡಿಗಳೋ ಬರೆದಿದ್ದಲ್ಲವೆಂದು ಸಾಬೀತುಪಡಿಸಲು. ಜೊತೆಗೆ ನ್ಯಾಕ್ ಗಾಗಿ ಕೆಲಸ ಮಾಡಿದವರಗಿಗೆ ಶಿಕ್ಷಾವಿಭೂಷಣ ಕೊಡಲಿಲ್ಲ ಎಂದು ಬರೆದಿದ್ದೇ ಅನಂತಪದ್ಮನಾಭರು ಈ ಕಾಗದವನ್ನು ಬರೆದಿದ್ದಾರೆ ಎಂದು ಕುಲಪತಿಗಳು ಊಹಿಸಲಿ ಅಂತ. ಏಕೆಂದರೆ ಹಾಗೆ ಬರೆಯುವುದರಿಂದ ಶಿಕ್ಷಾವಿಭೂಷಣ ಪಡೆದವರಿಗೆ ಯಾವುದೇ ಹಾನಿಯಿಲ್ಲ. ಜೊತೆಗೆ ಕುಲಪತಿಗಳು ಇಂತಹ ಬಿರುದುಗಳನ್ನು ಸರಿಯಾಗಿ ಕೊಡುತ್ತಿಲ್ಲ ಎಂದು ಆಕ್ಷೇಪಗಳಿವೆ ಎಂಬುದೂ ಇದರಿಂದ ತಿಳಿಯಲಿ ಅಂತ.

ಸೈನ್ ಮಾಡಿ ಬೈಕ್ ಪುರ್ ಅಂತ ಓಡಿಸಿಕೊಂಡು ಹೋಗುತ್ತಾರೆ ಅಂತ ಬರೆದಿರುವುದು ಹರಿಪ್ರಸಾದ್ ಕುರಿತಾಗಿ. ನಾನು ಈಗ ಒಂದು ದಿವಸ ಪರಿಸರದ ಅಧ್ಯಾಪಕೇತರ ಕರ್ಮಚಾರಿಗಳಿಗೆ ಗೀತಾ ಒಲಂಪಿಯಾಡ್ ನ ಪರೀಕ್ಷೆ ಕಟ್ಟಿಸಿದ್ದರಿಂದ ಅವರಿಗೆ ಪಾಠಮಾಡುವ ವ್ಯವಸ್ಥೆ ಮಾಡಿದ್ದೆ. ಹಾಗಾಗಿ ಅವರ ಅಪೇಕ್ಷೆಯ ಮೇರೆಗೆ ನಾನು ಅವರಿಗೆ ಉಚಿತವಾಗಿ ಗೀತಾ ಪ್ರೆಸ್ ನ ಕನ್ನಡದ ಅರ್ಥ ಸಹಿತವಾದ ಭಗವದ್ಗೀತೆಯ ಪುಸ್ತಕಗಳನ್ನು ಹಂಚ್ಚುತ್ತಿದ್ದೆ. ಐದಾರು ಪ್ರತಿಗಳು ಕಡಿಮೆಯಾಗಿದ್ದರಿಂದ ಯಾವತ್ತು ನಾನು ಸೈನ್ ಮಾಡಿ ಅದನ್ನು ತರಲು ಪೇಟೆಗೆ ೯.೩೦ ಕ್ಕೆ ಹೋಗಿದ್ದೆನೋ ಆವತ್ತೇ ಸುಬ್ರಾಯ ಭಟ್ಟರು ಸೈನ್ ಮಾಡಿ ಪೇಟೆಗೆ ಹೊರಡುತ್ತಿದ್ದ ನನ್ನನ್ನು ನೋಡಿ ಅವತ್ತೇ ಡೈರೆಕ್ಟರ್ ಬಳಿಯಲ್ಲಿ ಕಂಪ್ಲೆಂಟ್ ಮಾಡಿದ್ದರು. ನಾನು ಆವತ್ತು ಹತ್ತು ಗಂಟೆಗೆ ಪುಸ್ತಕ ಖರೀದಿ ಮಾಡಿ ಬಂದ ಮೇಲೆ ತಿಳಿಯಿತು ಈ ಮನುಷ್ಯ ಡೈರೆಕ್ಟರ್ ಬಳಿಯಲ್ಲಿ ಕಂಪ್ಲೆಂಟ್ ಮಾಡಿದೆ ಅಂತ. ಹೀಗೇ ಆ ಕಾಗದದಲ್ಲಿಯೂ ಬರೆದಿದ್ದರಿಂದ ಸ್ಪಸ್ಟ ಆಯ್ತು ಏನೆಂದರೆ ಅದನ್ನು ಬರೆದಿದ್ದು ಸುಬ್ರಾಯ ಭಟ್ಟ ಮತ್ತು ಆತನ ಪಟಾಲಮ್ಮೇ ಅಂತ.

ಚಂದ್ರಕಾಂತ ಭಟ್ಟರು ಹೆಚ್. ಪಿ. ಎಲ್. ತೆಗೆದುಕೊಂಡಿದ್ದರು. ಆದರೆ ಆಫೀಸಿನ ಮಂಜುಳಾ  ಎಮ್.ಎಲ್.(ಮೆಡಿಕಲ್ ಲೀವ್) ಅಂತ ಅಟೆಂಡೆಂನ್ಸ್ ಬುಕ್ ನಲ್ಲಿ ಬರೆದಿದ್ದಳು.  ಅದು ಯಾರದ್ದೋ ಸೂಚನೆಯ ಮೇರೆಗೆ ಬರೆದಂತೆ ಅನಿಸುತ್ತದೆ. ಯಾಕೆಂದರೆ ಯಾವತ್ತೂ ಅಟೆಂಡೆಂನ್ಸ್ ಬುಕ್ ನಲ್ಲಿ ಎಮ್.ಎಲ್.(ಮೆಡಿಕಲ್ ಲೀವ್) ಅಂತ ಬರೆಯುವ ಪದ್ಧತಿ ಇಲ್ಲ. ಹಾಗಾದರೆ ಅವಳ ಕೈಯಲ್ಲಿ ಆ ರೀತಿ  ಬರೆಯಲು ಪ್ರೇರೇಪಿಸಿದವರು  ಸುಬ್ರಾಯಭಟ್ಟರ ಪಟಾಲಮ್ಮಿನವರೇ ಎಂಬುದು ಸ್ಪಸ್ಟ.

ದೇವರು ನಿಜವಾಗಲೂ ಇದ್ದಾನೆ ರೀ. ಇಲ್ಲದಿದ್ದರೆ ಖದೀಮರ ಸಂಚು ಹೇಗೆ ಬಯಲಾಗುತ್ತೆ.

Sunday, May 5, 2024

ನಮ್ಮ ಶಾಲೆ

 

ನಮ್ಮ ಶಾಲೆ

ಮೇಲ್ಮಠದ ಎದುರಿನ ಅಂಗಳದ ಉತ್ತರದಲ್ಲಿ ಎತ್ತರದಲ್ಲಿ ಒಂದು ಸಣ್ಣ ಶಾಲೆ ಇತ್ತು. ಅದರಲ್ಲಿ ೨೦/೩೦ ಅಡಿ ಉದ್ದದ ಒಂದೇ ಕೊಠಡಿ ಇದ್ದದ್ದು. ಇನ್ನೊಂದು ಕಡಿಮಾಡಿನಡಿಯಲ್ಲಿ ಸಣ್ಣ ಕೊಠಡಿಯಿತ್ತು. ಅದನ್ನು ಯಾರಾದರೂ ಹೊರಗಿನ/ಪರವೂರಿನ ಉಪಾಧ್ಯಾಯರು ಬಳಸುತ್ತಿದ್ದರು.

ನಾನು ಶಾಲೆಗೆ ೫ನೇ ವರ್ಷಕ್ಕೆ ಹೋಗಲು ಆರಂಭಿಸಿದ್ದೆ. ನನ್ನ ಅಣ್ಣಂದಿರಿಬ್ಬರು ಅಕ್ಕಂದಿರಿಬ್ಬರು ಆಗ ಆ ಶಾಲೆಗೆ ಹೋಗುತ್ತಿದ್ದರು. ನಾನಿನ್ನೂ ಒಂದನೇ ತರಗತಿಗೆ ಸೇರಿರಲಿಲ್ಲ. ಶಾಲೆಯ ಒಬ್ಬರೇ ಒಬ್ಬರು ಮಾಸ್ಟರ್ ಆದ ವೃದ್ಧ ವೆಂಕಪ್ಪ ಹೆಬ್ಬಾರ್ ರವರು ನನಗೆ ಸ್ಲೇಟ್ನಲ್ಲಿ ಅ ಆ ಇ ಈ ಎಂಬ ಅಕ್ಷರಗಳನ್ನು ದೊಡ್ಡದಾಗಿ ಬರೆದು ಕೊಡುತ್ತಿದ್ದರು. ನಾನು ಅದನ್ನು ಹೊರಗಿನ ಜಗಲಿಯಲ್ಲಿ ಕುಳಿತು ಮತ್ತೆ ಮತ್ತೆ ತಿದ್ದಿ ಬರೆಯಬೇಕಿತ್ತು. ಹಾಗೆ ತಿದ್ದಿ ತಿದ್ದಿ ಮದ್ಯಾಹ್ನ ಆಗುವಾಗ ಗೋಣಿ ದಾರದಷ್ಟು ದಪ್ಪಗಾದ ನಾಲ್ಕು ಅಕ್ಷರಗಳು ತಯಾರಾಗುತ್ತಿದ್ದವು.

ಶಾಲೆಗೆ ಹೋಗುವಾಗ ಮಳೆಗಾಲದಲ್ಲಿ ನಮಗೆ ೫ ಮಂದಿ ಅಣ್ಣ ತಮ್ಮಂದಿರಿಗೆ ಅಕ್ಕತಂಗಿಯರಿಗೆ ಕೊಡೆ ಎಲ್ಲಿಂದ ತರಬೇಕು. ಆಗ ಪ್ರಾಯಶಃ ನಮ್ಮೂರಲ್ಲಿ ಮನೆಗೊಂದು ಕೊಡೆ ಇರ್ತಿತ್ತೋ ಇಲ್ವೋ ? ಜಾರ್ನಬೇಟ್ಟಿನ ಅಜ್ಜಿ ಲಕ್ಷ್ಮ್ಯಕ್ಕ ಯಾವಗಲೂ ಮರಸಣಿಗೆಯ ದೊಡ್ಡ ಎಲೆಯನ್ನು (ದಂಟು ಸಮೇತ ಕತ್ತರಿಸಿ)  ಹಿಡಿದುಕೊಂಡೇ ಎಲ್ಲಾ ಕಡೆ ಓಡಾಡುತ್ತಿದ್ದರು. ಪ್ಲಾಸ್ಟಿಕ್ ನ ಕೊಪ್ಪೆ ತಯಾರಿಸಿ ಬಹುಶಃ ಹೆಚ್ಚಿನ ಮಕ್ಕಳು ಮಳೆಗಾಲದಲ್ಲಿ ಬಳಸುತ್ತಿದ್ದರು. ನಮಗೂ ಅದೇ ಛತ್ರಿ. ನಾನಂತೂ ಇನ್ನೂ ಸೇಫ್ ಹೇಗಂತೀರಾ ? ಇಬ್ಬರು ಅಕ್ಕಂದಿರು ಒಂದು ಪ್ಲಾಸ್ಟಿಕ್ ನ್ನು ಮುಂದೆ ಒಬ್ಬಳು ಹಿಂದೆ ಒಬ್ಬಳು ಅಂತ ಎಳೆದು ಇಡಿದುಕೊಳ್ಳುತ್ತಿದ್ದರು. ನಾನು ಅವರಿಬ್ಬರ ನಡುವೆ ಸೇಫ್. ಆಗ ಆಳುಗಳೂ ಕೂಡ ಪ್ಲಾಸ್ಟಿಕ್ ನ ಕೊಪ್ಪೆಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಅದರೆ ಕೊಟ್ರಾಕ್ಯಾರ್ ದಾಟಿ ಕೆಳಸುಳಿಗೋಡಿನ(ಹಿತ್ತಲ್ಲದ) ಪಾಚಿ ತುಂಬಿದ ಸಂಕದಲ್ಲಿ(ಪಾಪು) ದಾಟುವುದು ತುಂಬ ಅಪಾಯದ ಕೆಲಸ ಆಗಿತ್ತು.

ನೆಟ್ಟಿಗಾಗುವಾಗ ಬಳಸುತ್ತಿದ್ದ ಕೊರಂಬು ತುಂಬ ಹಿತಕರ ಸಾಧನ ಆಗಿತ್ತು. ಪ್ಲಾಸ್ಟಿಕ್ ನ ಬಳಕೆ  ಆಗ ತೀರ ಕಡಿಮೆ ಇತ್ತು. ಕೊಡೆಗಳೂ ಹೆಚ್ಚಾಗಿ ಮರದ/ಬೆತ್ತದ ಜೆಲ್(ಹಿಡಿ ಮತ್ತು ಮಧ್ಯದ ಸಲಾಕೆ)ನವುಗಳೇ ಆಗಿದ್ದವು. ಅವುಗಳಲ್ಲಿ ಬಳಸು ಬಟ್ಟೆಯೂ ಕಪ್ಪಿನ ಕಾಟನ್(ಹತ್ತಿ)ಬಟ್ಟೆಯೇ ಆಗಿತ್ತು. ಅದು ಮಳೆ ಬಿಟ್ಟ ಮೇಲೆ ಒಣಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ನಂತರ ನಾನು ೫ ನೇ ತರಗತಿಯಲ್ಲಿದ್ದಾಗ ಟೆರಿಕಾಟ್ ಬಟ್ಟೆಯನ್ನು ಬಳಸಿದ ಬಟನ್ ನ ಕೊಡೆಗಳು ಮಾರುಕಟ್ಟೆಗೆ ಬರಲು ಆರಂಭಿಸಿದವು.

ನನಗೆ  ಆರು ವರ್ಷವಾದ ಬಳಿಕ ವೆಂಕಪ್ಪ ಹೆಬ್ಬಾರ್ ರು  ನನಗೆ ಒಂದನೇ ತರಗತಿ ಗೆ ಪ್ರವೇಶ ಕೊಟ್ಟರು. ಆಗ ನನ್ನ ತರಗತಿಯಲ್ಲಿ ಒಟ್ಟು ಎಂಟು ಜನ ಮಾತ್ರ ವಿದ್ಯಾರ್ಥಿಗಳು ಇದ್ದರು.

Saturday, May 4, 2024

ಕಳ್ಳ ಭಟ್ಟಿ ತಯಾರಿ

 

ಕಳ್ಳ ಭಟ್ಟಿ ತಯಾರಿ

          ನಮ್ಮ ಗುಡ್ಡೆಯಲ್ಲಿ ಹೆಚ್ಚಲ್ಲದಿದ್ದರೂ ಸುಮಾರು ಒಂದು ಕ್ವಿಂಟಾಲ್ ಗೇರುಬೀಜವಾಗುವಷ್ಟು ಗೇರುಮರಗಳಿದ್ದವು. ಹಾಗಾಗಿ ಆ ಹಣ್ಣುಗಳನ್ನು ಬಳಸಿಕೊಂಡು ಕಳ್ಳಭಟ್ಟಿ ತಯಾರಿಸುವ ಯೋಜನೆ ಸೂರ್ಯಣ್ಣ ಶೆಟ್ಟರದ್ದಾಗಿತ್ತು. ನಮ್ಮ ಜಮೀನಿನ ಪೂರ್ವದಲ್ಲಿ ಮಿತ್ತಗುಮ್ಮೆಯಲ್ಲಿ ಒಂದು ಕೆರೆ ಇತ್ತು. ಅದರ ಪಕ್ಕದಲ್ಲಿಯೇ ನಾವು ಬೇಸಿಗೆಯಲ್ಲಿ ಯಾವಾಗಲೂ ಕೊಡದಲ್ಲಿ ಅದೇ ಕೆರೆಯಿಂದ ನೀರೆತ್ತಿ ಸ್ನಾನ ಮಾಡುತ್ತಿದ್ದೆವು. ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಲು ಕಷ್ಟ ಅಂತ ಅಲ್ಲಿ ನಮ್ಮ ತಾಮ್ರದ ಹಂಡೆಯನ್ನು ತೆಗೆದುಕೊಂಡು ಹೋಗಿ ಬಟಾಬಯಲಿನಲ್ಲಿ ಒಂದು ಒಲೆ ಮಾಡಿ ಅಲ್ಲೇ ಬಿಸಿನೀರು ಕಾಯಿಸಿ ಸ್ನಾನ ಮಾಡುವ ಪರಿಪಾಠಿ ಮನೆಯ ಎಲ್ಲರದ್ದೂ. ಸೂರ್ಯಣ್ಣ ಶೆಟ್ಟರಿಗೆ ಈ ತಾಮ್ರದ ಹಂಡೆಯ ಮೆಲೆ ಕಣ್ಣು ಬಿತ್ತು. ಕಳ್ಳಭಟ್ಟಿ ತಯಾರಿಗೆ ಅದರ ಆವಶ್ಯಕತೆ ಇತ್ತು.

ಇನ್ನೊಂದು ಹಂಡೆಯನ್ನು ಸೂರ್ಯಣ್ಣ ಶೆಟ್ರು ಖರೀದಿಸಿ ತಂದ್ರು. ಅದರಲ್ಲಿ ಗೇರು ಹಣ್ಣುಗಳನ್ನು ತುಂಬಿಸಿ ಸ್ವಲ್ಪ ನೀರು ಬೆರೆಸಿ ೧೫ ದಿನಗಳ ಕಾಲ ಮುಚ್ಚಿ ಇಡುತ್ತಿದ್ದರು. ಗೇರುಹಣ್ಣು ಅದರಲ್ಲಿ ಕೊಳೆತು ಹುಳಿಯಾಗಿ ಹದವಾದ ಮೇಲೆ ರಾತ್ರಿ ಹೊತ್ತು ಭಟ್ಟಿ ತಯಾರಿಸುವ ಯೋಜನೆ. ಅದಕ್ಕೆ ಶೆಟ್ರಿಗೆ ಒಬ್ಬ ಸಹಾಯಕ ಬೇಕು. ಅವರಿಗೆ ಸುಲಭವಾಗಿ ಅದಕ್ಕೆ ಸಿಕ್ಕಿದ್ದು ಮತ್ತಾವಿನ ಹಬುರ ಗೌಡ. ಹಬುರ ಗೌಡ ನಮ್ಮ ಮನೆಗೆ ಯಾವಾಗಲೂ ಅಡಿಕೆ ಕೊಯ್ಲಿಗೆ, ತೆಂಗಿನಕಾಯಿ ಕೊಯ್ಲಿಗೆ, ಮಳೆಗಾಲದಲ್ಲಿ ಔಷಧಿ ಸಿಂಪರಣೆಗೆ ಬರ್ತಾ ಇದ್ದ. ತುಂಬ ಒಳ್ಳೆಯ ಮನುಷ್ಯ. ಭಟ್ಟಿ ತಯಾರಿಸಲಿಕ್ಕೆ ಶುರು ಮಾಡುವುದೇ ಆ ದಿನದ ಹಗಲಿನ ಕೆಲಸ (ನಮ್ಮ ಮನೇದು) ಮುಗಿದ ಮೇಲೆ. ಕೆಲಸ ಮುಗಿಯುವುದು ೬.೦೦ ಗಂಟೆಗೆ. ಆ ನಂತರ ಶೆಟ್ರು ೧೫ ದಿನದ ಹಿಂದೆ ಗೌಪ್ಯವಾಗಿ ತುಂಬಿಸಿ ಇಟ್ಟ ಹಂಡೆಯಿಂದ ಬಕೆಟಿನಲ್ಲಿ ಕೊಳೆತ ಗೇರುಹಣ್ಣನ್ನು ತಂದು ನಮ್ಮ ಸ್ನಾನದ ಹಂಡೆಗೆ ತುಂಬಿಸುತ್ತಿದ್ದ.  ಸುಮಾರು ಮುಕ್ಕಾಲು ಭಾಗದಷ್ಟು ಕೊಳೆತ ಗೆರು ಹಣ್ಣು ತುಂಬಿದ ಮೇಲೆ ಅದರ ಒಳಗೆ ಮುಳುಗದಂತೆ ಒಂದು ಬೋಗುಣಿಯನ್ನು (ಸುಮಾರು ೫ ಲೀ ನೀರು ತುಂಬುವಷ್ಟು ದೊಡ್ಡದು) ಹಗ್ಗದ ಸಹಾಯದಿಂದ ನೇತು ಹಾಕುತ್ತಾರೆ. ನಂತರ ಹಂಡೆಯ ಬಾಯಿಗೆ ತಾಮ್ರದ ಕಡುಬಿನ ಅಟ್ಟದ ಮುಚ್ಚಳವನ್ನು ಅಂಗಾತವಾಗಿ ಮುಚ್ಚಿ ಇಡುತ್ತಾರೆ. ಕಡುಬಿನ ಅಟ್ಟದ ಮುಚ್ಚಳ ಮತ್ತು ಹಂಡೆಯ ಬಾಯಿಯ ನಡುವಿನ ಗ್ಯಾಪ್ ನ್ನು ಅಂಟು ಮಣ್ಣು ಲೇಪಿಸಿ ಮುಚ್ಚುತ್ತಾರೆ. ನಂತರ ಅಂಗಾತ ಮುಚ್ಚಿದ ಕಡುಬಿನ ಅಟ್ಟದ ಮುಚ್ಚಳದ ಒಳಗೆ ನೀರನ್ನು ಸುರಿಯಲಾಗುತ್ತದೆ. ಸುಮಾರು ೨/೩ ಗಂಟೆಗಳ ಕಾಲ ಬಲವಾದ ಬೆಂಕಿಯಲ್ಲಿ ಕೊಳೆತ ಗೇರುಹಣ್ಣನ್ನು ಕುದಿಸಲಾಗುತ್ತದೆ. ಆ ವಧಿಯಲ್ಲಿ ಸುಮಾರು ೧೦/೧೨ ಬಾರು ಮುಚ್ಚಳದ ಮೇಲಿನ ಬಿಸಿಯಾದ ನೀರನ್ನು ತೆಗೆದು ತಣ್ಣೀರನ್ನು ಸುರಿಯಲಾಗುತ್ತದೆ. ಆಗ ಹಂಡೆಯ ಒಳಗೆ ನೆತು ಬಿಟ್ಟ ಸ್ಟೀಲಿನ ಬೋಗುಣಿಯಲ್ಲಿ ಬಾಷ್ಪೀಕರಿಸಿದ ಕೊಳೆತ ಗೇರುಹಣ್ಣಿ ನ ರಸ ಶೇಖರಣೆಯಾಗುತ್ತದೆ. ಅದರ ಪರಿಮಾಣ ಸುಮಾರು ೫ ಲೀ. ಸುಮಾರು ರಾತ್ರಿ ಹತ್ತು ಗಂಟೆಗೆ ಈ ಕೆಲಸ ಮುಗಿಯುತ್ತದೆ.

ಹಬುರನಿಗೆ ಅದರಲ್ಲಿ ಪ್ರಾಯಶಃ  ಎರಡು ಬಾರಿ ೯೦ ಕುಡಿಯುವ ಅವಕಾಶ. ಅವನಿಗೆ ಅದೇ ಸಂಬಳ. ಅದೇ ಇನಾಮು. ಉಳಿದ ಕಳ್ಳಭಟ್ಟಿಯನ್ನು ಬೇರೆ ಬೇರೆ ಬಾಟಲಿಗಳಿಗೆ ತುಂಬಿಸಿ ನಮ್ಮ ಅಡಿಕೆ ತೋಟದಲ್ಲಿ ಅಲ್ಲಲ್ಲಿ ಅಡಿಕೆ ಬುಡದಲ್ಲಿ ಶೆಟ್ರು  ಹುಗಿಸಿಟ್ಟಿರುತ್ತಾರೆ. ಯಾರದರೂ ಆಗಾಗ ಹಗಲಿನಲ್ಲಿ ಅವರನ್ನು ಕೇಳಿಕೊಂಡು ಬರುವ ಗಿರಾಕಿಗಳಿಗೆ ಶ್ಟ್ರು ಅದನ್ನು ಮಾರುತ್ತಾರೆ. ಹೇಗಿದೆ ಶೆಟ್ರ ಭಟ್ಟಿ?

Friday, May 3, 2024

ಸೂರ್ಯಣ್ಣ ಶೆಟ್ಟ್ರು.

 

ಸೂರ್ಯಣ್ಣ ಶೆಟ್ಟ್ರು.

         ನಮ್ಮ ತಂದೆಯವರು ತೀರಿ ಎರಡು ವರ್ಷದ ಬಳಿಕ ನಮ್ಮ ಮನೆಗೆ ಸೂರ್ಯಣ್ಣ ಶೆಟ್ಟರ ಆಗಮನವಾಯಿತು. ಆಗಲೇ ಶೆಟ್ರಿಗೆ ಅರವತ್ತು ವರ್ಷ ಕಳೆದಿತ್ತು. ಅವರಿಗೆ ದಿನಕ್ಕೆ ೮ ರೂಪಾಯಿ ಸಂಬಳ. ಅವರು ಚಲ್ಲ ಪೂಜಾರಿಯ ಮನೆಯಲ್ಲಿ ಪ್ರಾಯಶಃ ರಾತ್ರಿ ಉಳಿದುಕೊಳ್ಳುತ್ತಿದ್ದರು. ಚಲ್ಲ ಪೂಜಾರಿಯ ವಿಧವೆ ಮಗಳಾದ ಸಂಕ್ರಿಯ ಮೇಲೆ ಅವರಿಗೆ ಏನೋ ಅನುರಾಗ ಅಂತ ಅನಿಸುತ್ತದೆ.

          ನಮ್ಮ ಮನೆಯಲ್ಲಿ ಬೆಳಿಗ್ಗೆ ೮.೩೦ ಕ್ಕೆ ಬಂದು ಎರಡು ಮೂರು ಹೊರೆ ಸೊಪ್ಪು/ದರಲೆ ಮಾಡಿ, ೨/೩ ಹೊರೆ ಹಸಿರು ಹುಲ್ಲು ಮಾಡಿ, ತೋಟದ ಕೆಲಸ ಮಾಡಿ ದನಗಳಿಗೆ ಕೋಣಗಳಿಗೆ ಕಲಕಚ್ಚು ಕೊಟ್ಟು ಆರೈಕೆ ಮಾಡಿ ಸಂಜೆ ಸ್ನಾನ ಮಾಡಿ ಊಟ ಮಾಡಿ ೬ ಗಂಟೆಗೆ ಹೋಗುತ್ತಿದ್ದರು.

ವಿಶೇಷವಾಗಿ ಸೂರ್ಯಣ್ಣ ಶೆಟ್ರಿಗೆ ಪ್ರಿಯವಾದ ಕೆಲಸ ಅಂದರೆ ಹೂಟೆ ಮಾಡುವುದು. ಅವರು ಗದ್ದೆಯಲ್ಲಿ ಹೂಟೆ ಮಾಡಲಿಕ್ಕೆ ಕೊಣಗಳನ್ನು ಕರಕೊಂಡು ಹೋಗುವಾಗ ನಾನೂ ಕೂಡ ಹೋಗುತ್ತಿದ್ದೆ. ಅವರು ಕೋಣಗಳೆರಡಕ್ಕೆ ನೊಗ ಕಟ್ಟಿ ನೇಗಿಲನ್ನು(ನಾವೇರಿ) ಕಟ್ಟಬೇಕಿದ್ದರೆ ಇನ್ನೊಂದು ತುದಿಯಲ್ಲಿ ನೇಗಿಲ ಹಿಡಿಯನ್ನು ಹಿಡಿದುಕೊಳ್ಳಲು ಯಾರಾದರೂ ಬೇಕಾಗುತ್ತದೆ. ನಾನು ಅದಕ್ಕೆ ಆಗ ಉಪಲಭ್ಯನಿರುತ್ತಿದ್ದ ಹುಡುಗ. ಆಮೇಲೆ ಶೆಟ್ರಿಗೆ ಹತ್ತು ಗಂಟೆಗೆ ಚಾ ತಿಂಡಿ(ದೋಸೆ/ಕಡುಬು) ತೆಗೆದು ಕೊಂಡು ಹೋಗುವುದೂ ನಾನೇ. ಚಾ ಒಂದು ಲೋಟದಷ್ಟು ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಒಂದು ಸಣ್ಣ ಸ್ಟೀಲಿನ ಚೊಂಬು ಮನೆಯಲ್ಲಿ ಇತ್ತು.  ಆ ಚೊಂಬಿನಲ್ಲಿ ಮುಕ್ಕಲುಭಾಗ ಚಾ ಅವರಿಗೆ ಬೇಕಾಗ್ತಿತ್ತು. ಆಮೇಲೆ ಮಧ್ಯಾಹ್ನ ಹೂಟೆ ಮುಗಿದ ಮೇಲೆ ಕೋಣಗಳನ್ನು ಸ್ನಾನ ಮಾಡಿಸಲು ಪೊಸಮಠದ ಹೊಳೇಗೆ(ಗುಂಡಿಗೆ) ಕರೆದುಕೊಂಡು ಹೋಗುತ್ತಿದ್ದರು. ಆಗಲೂ ನಾನು ಹೋಗುತ್ತಿದ್ದೆ. ಜೊತೆಗೆ ಕರುಣನೂ ಇರುತ್ತಿದ್ದ. ಮಳೆಗಾಲದ ಆರಂಭ(ಕಾರ್ತಿ ತಿಂಗಳು) ಆಗಿದ್ದರಿಂದ ಮಳೆ ಬಂದು ಹೊಳೆಯಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ಕೋಣಗಳು  ಸಂತೋಷದಿಂದ ಗೊಂಡಿಯಲ್ಲಿ ಈಜಾಡುತ್ತಿದ್ದಾಗ ನಾವೂ ಕೂಡ ಅದರಲ್ಲಿ ಅವುಗಳ ಜೊತೆಗೆ ಮುಳುಗೇಳುತ್ತಿದ್ದೆವು. ಅವುಗಳ ಬೆನ್ನು ಹೆಚ್ಚಾಗಿ ಮುಳುಗುತ್ತಿರಲಿಲ್ಲ ಹಾಗಾಗಿ ಬೆನ್ನಲ್ಲಿದ್ದ ಕೆಸರನ್ನು ಶೆಟ್ರು ತೊಳೆಯುತ್ತಿದ್ದರು. ಆ ಬಳಿಕ ಅವುಗಳನ್ನು ಮೇಯಲಿಕ್ಕೆ ಅಲ್ಲೇ ಬೈಲಿನ ಅಂಚಿಗೆ ಶೆಟ್ರು ಬಿಡುತ್ತಿದ್ದರು. ನಾವು ಮಧ್ಯಾಹ್ನ ಊಟ ಮುಗಿಸಿ ಅವುಗಳು ಮೇಯುತ್ತಿರುವಾಗ ಅವುಗಳ ಬೆನ್ನೇರಿ ಕುಳಿತುಕೊಳ್ಳುತ್ತಿದ್ದೆವು. ನಾನು ಕಾಳನ ಮೇಲೆ ಕುಳಿತರೆ ಕರುಣ ಬೆಳ್ಳನ ಮೇಲೆ ಕುಳಿತುಕೊಳ್ಳುತ್ತಿದ್ದ. ಆದರೆ ಅವು ಪಾಪದ ಕೋಣಗಳು. ಮೇಯುವಾಗ ಅವುಗಳಿಗೆ ನಾವು ಕುಳಿತಿರುವುದು ಕಿರಿಕಿರಿಯಾದರೂ ಸಹಿಸಿಕೊಳ್ಳುತ್ತಿದ್ದವು. ಆದರೆ ಅಮ್ಮನಿಗೆ ಗೊತ್ತಾದರೆ ಅಮ್ಮ “ಕೋಣನ ಮೇಲೆ ಕುಳಿತುಕೊಂಡ್ರೆ ಆನೆಯ ಮೇಲೆ ಮೇಲೆ ಕುಳಿತುಕೊಳ್ಳುವ ಯೋಗ ನಶಿಸುತ್ತದೆ” ಅಂತ ಬೈಯುತ್ತಿದ್ದಳು. ಆದರೆ ನಮಗೆ ಆನೆ ಎಲ್ಲಿ ಯಾವಾಗ ಸಿಗುತ್ತದೆ ? ಆ ಯೋಗ ಅಂದರೆ ಆನೆ ಸಿಕ್ಕಿದ ಮಾತ್ರಕ್ಕೆ ಕುಳಿತುಕೊಳ್ಳುವಂತಹುದಲ್ಲ. ಅದಕ್ಕೆ ಅಂಥ ಸಾಧನೆ ಮಾಡಿ ಗೌರವವನ್ನು ಸಂಪಾದಿಸಿರಬೇಕು. ಆಗ ಮಾತ್ರ ಕುಳಿತುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಮಾವುತ ಕೂತ ಹಾಗಾಗುತ್ತದೆ. ಮೈಸೂರು ಮಹಾರಾಜರು ಕುಳಿತ ಹಾಗಾಗುವುದಿಲ್ಲ. ಅದು ತುಂಬ ದೂರದ ಮಾತು. ಹಾಗಾಗಿ ನಾವು ಹತ್ತಿರದಲ್ಲೆ ಇದ್ದ ಕೋಣನ ಮೇಲೆ ಕೂರುವುದರಲ್ಲೇ ಸಂತೋಷ ಪಡುತ್ತಿದ್ದೆವು. ಪ್ರಾಯಶಃ ಹೆಚ್ಚಿನ ಮನುಷ್ಯರ ಪ್ರವೃತ್ತಿಯೇ ಹೀಗೆ. ದೊಡ್ಡದಾದದ್ದನ್ನು ಪಡೆಯುವ ಉದ್ದೇಶವೇ ಇಲ್ಲ, ಹಂಬಲವೂ ಇಲ್ಲ, ಪ್ರವೃತ್ತಿಯಾಗಲೀ, ಪ್ರಯತ್ನವಾಗಲೀ ಇಲ್ಲವೇ ಇಲ್ಲ. ಆದರೆ ಅಮ್ಮ ನಿರಕ್ಷರಳಾದರೂ ದೊಡ್ಡದಾದ ಲಕ್ಷ್ಯವನ್ನು ತೋರಿಸುವ ಕೆಲಸ ಮಾಡಿದ್ದಾಳೆ. ನಾವು ದಡ್ರು ಅಷ್ಟೇ.

Saturday, March 30, 2024

ಕಬ್ಬಿನಾಲೆಯ ನಮ್ಮ ಜಮೀನಿನಲ್ಲಿ ಗದ್ದೆ ಬೇಸಾಯ

ನಾನು ಸಣ್ಣವನಿದ್ದಾಗ ನಮ್ಮ ಜಮೀನಿನ ಭಾಗಗಳಾದ ದೈಕ್ ದ ಬೈಲ್, ಪೊಸಮಠ, ಬೈಲ್, ಅರುವಾರ ಗಳಲ್ಲಿ ಗದ್ದೆ ಬೇಸಾಯ ಮಾಡುತ್ತಿದ್ದರು. ಆಗ ಅಷ್ಟೂ ಗದ್ದೆಗಳಿಂದ ಭತ್ತದ ಹುಲ್ಲಿನ ಹೊರೆ  ನಮ್ಮ ಮನೆಯ ಮೇಲಿನ ಅಂಗಳದಲ್ಲಿ ರಾಶಿ ಹಾಕುತ್ತಿದ್ದರು. ರಾತ್ರಿಯ ಹೊತ್ತಿಗೆ ೭ ಗಂಟೆಯ ನಂತರ  ಗುಳೇಲಿನ ಶಶಿ, ಮಂಜು, ಮೇಲ್ಮನೆಯ ಪೊಮ್ಮಣ್ಣ, ಕೆಳಮನೆಯ ಬಾಲು, ಕುಮಾರ, ಬಾಯರಬೆಟ್ಟಿನ ಸೀತಾರಾಮ, ಮತ್ತಾವಿನ ಹಬುರ ಗೌಡ, ಬೈಲಿನ ನಾರಾಯಣ ಗೌಡ, ಕುರುಂಬಿಲು ನ ಮಕ್ಕಳಾದ ಗೋವಿಂದ,ರಾಮ, ಅಲಂಗಾಡಿನ ಸಿದ್ದು ಗೌಡನ ಮಗ ರಾಜು, ದರ್ಕಾಸಿನ ವಾಸು ಗೌಡ  ಮುಂತಾದವರು ಹುಲ್ಲು ಜಪ್ಪಲಿಕ್ಕೆ ಬರುತ್ತಿದ್ದರು. ಕುರುಂಬಿಲು ನ ಮಕ್ಕಳಾದ ಸುಶೀಲ, ರತ್ನ, ಮಜ್ಜಿಗುಡ್ಡೆಯ ಪದ್ದು, ಸುಶೀಲ, ಹಬುರ ಗೌಡನ ಹೆಂಡತಿ ಕಮಲು, ಅಲಂಗಾಡಿನ ಹಂಕರ ಗೌಡನ ಹೆಂಡತಿ, ಬೈಲ್ ನ್ ಅವಾಸುಗೌಡನ ಹೆಂಡತಿ ಯಮುನ, ಮತ್ತಾವಿನ ಹುಕ್ರ ಗೌಡನ ಹೆಂಡತಿ ಬುಕ್ಕಿ, ಶೀನ ಗೌಡನ ಮಗಳಾದ ಶಂಕರಿ, ದೋಣಿಮಾರಿನ ಅಪ್ಪಿ ಮುಂತಾದವರು ಕೊಯ್ಲಿಗೆ ಬರುತ್ತಿದ್ದರು.  ಬಂಡರಬೆಟ್ಟಿನಲ್ಲಿದ್ದ ಕುರುಂಬಿಲು ಮತ್ತವಳ ಕುಟುಂಬಕ್ಕೆ ಒಂದು ಒಕ್ಕಲು ಬೇಕು ಅಂತ ನಮ್ಮ ಮತ್ತು ಜಾರ್ನಬೆಟ್ಟಿನ ಜಮೀನಿನ ಮಧ್ಯೆ(ಪುಳಿಕ್-ದ ಬೆಟ್ಟು) ಹೊಸದಾಗಿ ನಾನು ಶಾಲೆಗೆ ಸೇರುವ ಮುಂಚೆಯೇ ಮನೆ ಕಟ್ಟಿಸಿ ಕೊಟ್ಟಿದ್ದೆವು.  ನಾನು ಆ ಮನೆಯ ಗೃಹಪ್ರವೇಶಕ್ಕೆ ಹೋದ ನೆನಪು ಈಗಲೂ ಇದೆ. ಸಂಜೆಯ ಹೊತ್ತಿಗೆ ಗೃಹಪ್ರವೇಶಕ್ಕೆ ನಮಗೆ ಕೇಸರಿಬಾತ್ ಮಾಡಿ ಬಡಿಸಿದ್ದನ್ನು ಖುಶಿಯಿಂದ ತಿಂದಿದ್ದೆ.

ಹುಲ್ಲು ಜಪ್ಪಿದ ಮೇಲೆ ನಾಲ್ಕೈದು ಮೊಟ್ಟೆ (ಕುತ್ರಿ ಅಂತ ಮಲ್ನಾಡಿನಲ್ಲಿ ಹೇಳ್ತಾರೆ) ಮಾಡುತ್ತಿದ್ದರು. ಆ ಹುಲ್ಲಿನ ಮೊಟ್ಟೆಗಳ ಸುತ್ತ ಸೆಗಣಿ ಸಾರಿಸುತ್ತಿದ್ದರು. ಬೇಸಿಗೆಯಲ್ಲಿ ನಮಗೆ ಅತ್ಯಂತ ಆನಂದದ  ಜಾಗ ಅಂದರೆ ಹುಲ್ಲಿನ ಮೊಟ್ಟೆಗಳು. ನಾವು ಅದರ ಸುತ್ತಲೂ ಸುತ್ತು ಬರುತ್ತ ಬೇರೆ ಬೇರೆ ರೀತಿಯ ಆಟ ಆಡುತ್ತಿದ್ದೆವು. ಅಲ್ಲೆ ಪಕ್ಕದಲ್ಲಿದ್ದ ಮಾವಿನ ಮರದ ಬೆಳೆದ ಮಾವುಗಳನ್ನು ಕೊಯ್ದು ಮೊಟ್ಟೆಯ ಹುಲ್ಲುಸೂಡಿಗಗಳ(ಹುಲ್ಲಿನಕಟ್ಟು) ಮಧ್ಯೆ ಹುಗಿದಿಡುತ್ತಿದ್ದೆವು. ಆನಂತರ ಒಂದೆರಡು ದಿನಗಳಲ್ಲಿ ಅವು ಹಣ್ಣಾದ ಮೇಲೆ ತಿನ್ನುತ್ತಿದ್ದೆವು.

ಆದರೆ ಈ ಆನಂದ ಬಹಳ ವರ್ಷ ಇರಲಿಲ್ಲ. ನಮ್ಮ ಅಣ್ಣಂದಿರು  ದೈಕ್ ದ ಬೈಲು ಮತ್ತು ಅರುವಾರದ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಮಾರ್ಪಡಿಸಲು ನಿರ್ಣಯಿಸಿದ್ದರು. ಅರುವಾರದಿಂದ ಹೊರೆ ತರುವುದು ತುಂಬ ಕಷ್ಟ. ಗುಡ್ಡ ಇಳಿದು ಹೋಗಿ ಮತ್ತೆ ಹತ್ತಿ ಬರುವಾಗ ಸುಸ್ತಾಗಿರುತ್ತದೆ. ಅರುವಾರ ಶಿವರಾಮಡಿಯ ಹತ್ತಿರ ಇದೆ. ಪ್ರಾಯಶಃ ಅದಕ್ಕೆ ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ಅಡಿಕೆ ಸಸಿ ನೆಟ್ಟಿದ್ದರು.

ಆ ನಂತರ ಪೊಸಮಠದ ಗದ್ದೆಗೆ ನಾನು ಒಂಭತ್ತನೆ ತರಗತಿಯಲ್ಲಿದ್ದಾಗ ಅಡಿಕೆ ಸಸಿ ನೆಟ್ಟರು. ಉಳಿದದ್ದು  ಬಾಕ್ಯಾರು ಮತ್ತು ಬೈಲು ಮಾತ್ರ.  ಬೈಲಿನಲ್ಲಿ ನಾನು ೨೦೦೮ರಲ್ಲಿ ಮದುವೆ ಯಾದ ಬಳಿಕವೂ ಪುಟ್ಟು ಗದ್ದೆ ಬೇಸಾಯ ಮಾಡುತ್ತಿದ್ದ ಆದಾಯ ಇಲ್ಲದಿದ್ದರೂ ಮಾಡದೇ ಇದರ್ಬಾರದು ಎಂಬ ಆದರ್ಶದ ಬೆನ್ನೇರಿ.  

ನಾನು ಸಣ್ಣವನಿದ್ದಾಗ ಅಂದರೆ ಸುಮಾರು ೪೦ ವರ್ಷಗಳ ಹಿಂದೆ ಒಂದು ಬಾರಿ ರಾಧಣ್ಣನ ಮನೆಯ ಮೇಲಿರುವ ( ೫೭ ವರ್ಷಗಳ ಹಿಂದೆ ಸುಟ್ಟು ಹೋದ ನಮ್ಮ ಮನೆಯ ಪಕ್ಕದಲ್ಲಿದ್ದ) ಬೆಟ್ಟ್ ಗದ್ದೆಯನ್ನು ಸ್ವತಃ ರಾಧಣ್ಣನೇ ಹೂಟೆ ಮಾಡಿದ್ದನ್ನು ನೋಡಿದ ನೆನಪಿದೆ. ಆದರೆ ಅದರಲ್ಲಿ ಆವಾಗ ಚೆನ್ನಾಗಿ ಬೆಳೆ ಬಂದಿರಲಿಲ್ಲ. ಆ ನಂತರ ಅಲ್ಲಿ ಯಾವತ್ತೂ ಗದ್ದೆ ಬೇಸಾಯ ಮಾಡಿದ ದಾಖಲೆಯಿಲ್ಲ.

ಕುರುಂಬಿಲು ಇಡೀ ದಿನ ನಮ್ಮ ಅಡತಬೆಟ್ಟುದ(ನ) ತೋಟದ ಅಡಿಕೆ ಹೆಕ್ಕಿಕೊಂಡು ಎಲೆಅಡಿಕೆ ತಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಅವಳ ಮಕ್ಕಳಾದ ರತ್ನ ಮತ್ತು ಸುಶೀಲ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು. ಅವರಿಗೆ ಆಗ ದಿನಕ್ಕೆ ೨ ರೂಪಾಯಿ ಸಂಬಳ ಇತ್ತು. ಜೊತೆಗೆ ಒಂದು ಸೇರು ಅಕ್ಕಿ. ನಾನೇ ಸ್ವತಃ ಬಹಳ ಬಾರಿ ಅವರಿಗೆ ಕುಚ್ಚಿಲು ಅಕ್ಕಿಯನ್ನು ಸೇರಿನಲ್ಲಿ ಅಳೆದು ಕೊಟ್ಟಿದ್ದು ನೆನಪಿದೆ. ಆದರೆ ದೂರದ ಮತ್ತಾವು ಮೊಟಾದ ಕಡೆಯಿಂದ ಬಂದವರಿಗೆ ಮನೆಯಲ್ಲಿ ಮಧ್ಯಾಹ್ನದ ಊಟ ಮಡಿಸುತ್ತಿದ್ದುದರಿಂದ ಅವರಿಗೆ ೨ ರೂಪಾಯಿ ಸಂಬಳದೊಂದಿಗೆ ಕೇವಲ ೩ ಸಿದ್ದೆ ಅಕ್ಕಿ ಕೊಡುವ ಪದ್ಧತಿ ಇತ್ತು.  ಪ್ರಾಯಶಃ ಆಗ ನಾನು ೨ ನೇ ತರಗತಿಯಲ್ಲಿದ್ದೆ. ಯಾಕೆಂದರೆ ಕುರುಂಬಿಲುವಿನ ಕೊನೆಯ ಮಗಳು ಅದರ ಹಿಂದಿನ ವರ್ಷ ಒಂದನೆ ತರಗತಿಯಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದಳು. ನಂತರ ಅವಳು ಶಾಲೆಗೆ ಬರಲಿಲ್ಲ. ಪ್ರಾಯಶಃ ಆ ನಂತರ ಸುಮಾರು ಹತ್ತು ವರ್ಷ ಕುರುಂಬಿಲುವಿನ ಕುಟುಂಬ ಅಲ್ಲಿ ಇತ್ತು. ಆಮೇಲೆ ಯಾಕೊ ಏನೊ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅವರು ಮನೆ ಬಿಟ್ಟು ಮುದ್ರಾಡಿಗೆ ಹೊಗಿ ಸೆಟ್ಲ್ ಆದರು.

ಈಗ ನಾನು ಇತ್ತೀಚಿಗೆ ಅಂದರೆ ಕಳೆದ ವರ್ಷ(೨೦೨೩ ಜನವರಿ) ಮೇಲ್ಮಠ ದೇವಸ್ಥಾನ ಆವರಣದ ಕೊಡಮಣಿತ್ತಾಯ ಪರಿವಾರ ದೈವಗಳ ವಾರ್ಷಿಕ ನೇಮೊತ್ಸವಕ್ಕೆ(ಕೋಲ) ಹೋದಾಗ  ಸುಮಾರು ೩೦ ವರ್ಷಗಳ ನಂತರ ಕುರುಂಬಿಲುವಿನ ಮಗ ರಾಮನನ್ನು ನೋಡಿದೆ. ಅವನಿಗೆ(ಅವನ ಕುಟುಂಬಕ್ಕೆ) ನಮ್ಮೂರ ಜಾತ್ರೆಯಲ್ಲಿ ದೀವಟಿಗೆ ಹಿಡಿಯುವ ಜವಾಬ್ದಾರಿ ಇದೆ.  ಜಾತ್ರೆ ಗೆ ಅವನು ಯಾವಾಗಲೂ ದೀವಟಿಗೆ ಹಿಡಿಯಲು ಬರ್ತಾನೆ. ಆದರೆ ನಾನು ಜಾತ್ರೆಗೆ ಹೋಗದೆ ಬಹಳ ವರ್ಷಗಳೇ ಕಳೆದಿದ್ದವು. ಹಾಗಾಗಿ ಅವನನ್ನು ಮಧ್ಯಂತರದಲ್ಲಿ ನೋಡುವ ಅವಕಾಶ ಆಗಿರಲಿಲ್ಲ.


Saturday, March 23, 2024

ನನ್ನ ಅಪ್ಪ

 

ನನ್ನ ಅಪ್ಪ

ನನ್ನ ಜೀವನದಲ್ಲಿ ನನಗೆ ಅಪ್ಪನ ಸಾಂಗತ್ಯ ಕೇವಲ ಏಳು ವರುಷ. ಆದರೆ ಜೀವನಪೂರ್ತಿ ನೆನಪಿಸಿಕೊಳ್ಳುವಷ್ಟು ಆದರ್ಶಮೂರ್ತಿ ಆಗಿದ್ದರು. ಭೌತಿಕವಾಗಿ ಸಮೃದ್ಧಿಯನ್ನು ನಾವು ಎಷ್ಟು ಹೊಂದಬೇಕು ಎನ್ನುವುದಕ್ಕಿಂತ ಸಂತುಲಿತ ಜೀವನಕ್ಕಾಗಿ ಬೇಕಾಗುವ ವ್ಯವಸ್ಥೆಯನ್ನು ಅವರು ಮಾಡಿದ್ದರು. ಓದಿದ್ದು ಏಳನೇ ಕ್ಲಾಸಿನವರೆಗೆ ಮಾತ್ರ ಆದರೂ ವ್ಯಾವಹಾರಿಕವಾಗಿ ಯಾವ ಶಿಕ್ಷಿತರಿಗೂ ಕಡಿಮೆ ಇಲ್ಲದಂತೆ ಬದುಕಿದವರು. ಮನೆಯ ಹಿರಿಯ ಮಗನಾಗಿ ಜವಾಬ್ದಾರಿಯನ್ನು ಹೊತ್ತುಕೊಂಡು ತಮ್ಮಂದಿರಿಬ್ಬರಿಗೆ ಮದುವೆ ಮಾಡಿಸಿ, ಜಮೀನಿನ ವ್ಯವಸ್ಥೆ ಮಾಡಿಸಿ ಕೊಟ್ಟರು. ಪಿತ್ರಾರ್ಜಿತವಾಗಿ ಬಂದ ಚಿನ್ನದ ಒಡವೆಗಳನ್ನು ತಮ್ಮಂದಿರಿಗೇ ಬಿಟ್ಟು, ರಾಮನನ್ನು ಆರಾಧಿಸುವ ಸಲುವಾಗಿ ಪರಂಪರಾಗತವಾಗಿ ಬಂದ ರಾಮಟಂಕಿಯಲ್ಲಿ ಒಂದನ್ನು ಮಾತ್ರ ಪೂಜೆಗಾಗಿ ಮನೆಗೆ ತಂದವರು.

 ಹಿರಿಯರು ಕಟ್ಟಿದ ಮೂಲ ಮನೆಯನ್ನು ಕಿರಿಯ ತಮ್ಮನಿಗೆ ಬಿಟ್ಟು ೧೮ ಎಕರೆಯಷ್ಟು ಜಮೀನನ್ನು ಅವನಿಗೆ ಕೊಟ್ಟು ತಾನು ೧೪ ಎಕರೆಯ ಜಮೀನಿನನ್ನು ಇಟ್ಟುಕೊಂಡು ಬೇರೆಯೇ ಹುಲ್ಲಿನ ಮಾಡಿನ ಮನೆಯನ್ನು ಹೊಸದಾಗಿ ಕಟ್ಟಿಕೊಂಡರು. ಅದಕ್ಕೂ ಅನತಿ ಕಾಲದಲ್ಲಿ ಬೆಂಕಿ ಬಿದ್ದಾಗ (ಇಂದಿಗೆ ೫೮ ವರ್ಷಗಳ ಹಿಂದೆ, ಅಂದರೆ ೧೯೬೬ ನೆಯ ಇಸವಿಯಲ್ಲಿ) ಇನ್ನೊಂದು ಆಗಿನ ಕಾಲಕ್ಕೆ ಹಳ್ಳಿಯಲ್ಲಿ ಸುಸಜ್ಜಿತವೆನಿಸಿದ ಮನೆಯನ್ನು ಕಟ್ಟಿಸಿದರು. ಇನ್ನೊಬ್ಬ ತಮ್ಮ ಮುದ್ರಾಡಿಯಲ್ಲಿ ಇದ್ದ ಪಿತ್ರಾರ್ಜಿತ ಜಮೀನನ್ನು ಹೊಂದಲು ಬಯಸದೆ, ಊರಿನಲ್ಲೇ ಕಾಡಿನ ಮಧ್ಯೆ ಪೇರಳ ಎಂಬಲ್ಲಿ ೧೨ ಎಕರೆಯ ಜಮೀನನ್ನು ಹೊಂದಲು ಬಯಸಿದಾಗ ಸಂತೋಷವಾಗಿ ಒಪ್ಪಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.

ಊರಿಗೆ ರಸ್ತೆಯಿಲ್ಲದೆ, ವಾಹನಗಳ ಸೌಕರ್ಯವೇ ಇಲ್ಲದಿದ್ದರೂ ೧೨ ಕಿ.ಮೀ. ದೂರದ ಹೆಬ್ರಿಯಿಂದ ಮನೆಗೆ ಬೇಕಾಗುವ ದಿನಸಿ ಇತ್ಯಾದಿಗಳನ್ನು ಹೇಗೆ ತರುತ್ತಿದ್ದರೋ ಅರ್ಥವಾಗುವುದಿಲ್ಲ. ೧೨ ಕಿ.ಮೀ.  ಕಾಲ್ನಡಿಗೆಯಲ್ಲೇ  ಬರುವಾಗ ಅದೆಷ್ಟು ಭಾರವನ್ನು ಹೊತ್ತುಕೊಂಡು ಬರಬಹುದು ಅಂತ ಊಹಿಸಿದರೆ ಆಶ್ಚರ್ಯವಾಗುತ್ತದೆ. ಈಗ ಶೃಂಗೇರಿಯಲ್ಲಿ ನನ್ನ ವಾಸ. ಅಂಗಡಿಯ ಬುಡಕ್ಕೆ ವಾಹನ ಹೋಗುತ್ತದೆ. ಮನೆಯ ಒಳಗೆಯೇ ವಾಹನ ಬರುತ್ತದೆ. ಆದರೂ ಒಂದು ಕಾರು ಮತ್ತು ಮೂರು ದ್ವಿಚಕ್ರವಾಹನಗಳಿದ್ದರೂ ಅಂಗಡಿಯಿಂದ ತಿಂಗಳ ಸಾಮಾನು(ದಿನಸಿ) ತರುವುದು ನನಗೆ ಸಲೀಸೇನಲ್ಲ.

ದರ್ಶನಪಾತ್ರಿ

ನಮ್ಮ ಊರಿನಲ್ಲಿ ನಮ್ಮ ಕುಟುಂಬದವರೇ ಕಟ್ಟಿಸಿದ ದೇವಸ್ಥಾನ ಲಕ್ಷ್ಮೀನಾರಾಯಣ ದೇವಸ್ಥಾನ. ನಮ್ಮ ಕುಟುಂಬದ ಹಿರಿಯರೇ ಊರಿನ ಪಟ್ಲೇರ್(ಪಟೇಲರು) ಆಗಿದ್ದರಿಂದ ದೇವಸ್ಥಾನ ಕಟ್ಟಿಸುವುದು ಅವರ ಜವಾಬ್ದಾರಿಯಾಗಿತ್ತು ಹಾಗೂ ಅದು ಸುಲಭವೂ ಆಗಿತ್ತು.

ನನ್ನ ತಂದೆಗೆ ಆ ದೇವಸ್ಥಾನದಲ್ಲಿ ದರ್ಶನ ಪಾತ್ರಿಯ ಗೌರವ. ಸನ್ನಡತೆಯ  ಸಾತ್ವಿಕಜೀವನ ನಡೆಸುವ ವ್ಯಕ್ತಿ ಮಾತ್ರ ಇದಕ್ಕೆ ಅರ್ಹ. ದರ್ಶನ ಪಾತ್ರಿಯಾದವನು ದೇವಸ್ಥಾನದ ಎಲ್ಲ ಉತ್ಸವಗಳ ಸಂದರ್ಭದಲ್ಲಿಯೂ ಸಾಪ್ತಾಹಿಕ ಕಠಿನ ದೀಕ್ಷೆ(ಮಡಿಯಲ್ಲಿ ಕೂರುವುದು) ಅನಿವಾರ್ಯ.  ಆ ಸಂದರ್ಭದಲ್ಲಿ  ನಿತ್ಯಕ್ಕಿಂತ ಹೆಚ್ಚುವರಿಯಾಗಿ ಅನುಷ್ಠಾನ ಮಾಡಬೇಕು. ಬೆಳಿಗ್ಗಿನ ಜಾವದಲ್ಲಿ ಆರಂಭಿಸಿದ ಅನುಷ್ಠಾನ ಕಾರ್ಯ ಹತ್ತು ಹನ್ನೊಂದು ಗಂಟೆಯ ತನಕ ನಡೆಯುತಿತ್ತು. ನಂತರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದ ನಂತರ ಮಧ್ಯಾಹ್ನದ ಊಟ. ಬೆಳಿಗ್ಗೆ ತಿಂಡಿಯಿಲ್ಲ ರಾತ್ರಿಯ ಊಟವೂ ನಿಷಿದ್ಧ. ಈ ಸಂದರ್ಭದಲ್ಲಿ ಮನೆಗೆ ಇತರರು ಬರುವಾಗ ಮನೆಯ ಅಂಗಳಕ್ಕೂ ಚಪ್ಪಲಿಯನ್ನುಹಾಕಿಕೊಂಡು ಬರುವುದಿಲ್ಲ. ಅಂಗಳದ ಮೂಲೆಯಲ್ಲೇ ಚಪ್ಪಲಿಯನ್ನು ಬಿಟ್ಟು ಬರುವುದನ್ನು ನಾನು ಯಾವಾಗಲೂ ಗಮನಿಸುತ್ತಿದ್ದೆ.  ಮುಂದೊಂದು ಬಾರಿ ಊರಿನ ಹಸಲರ ಹುಡುಗನಿಗೆ ಸಂಸ್ಕೃತವನ್ನು ಕಲಿಸಿ ನಾಟಕವನ್ನು ಅಭ್ಯಾಸ ಮಾಡಿಸಿ, ಆತ ಮನೆಗೆ ಬಂದಾಗ ನಾನು ಮನೆಯ ಒಳಗೆ ಕರೆದೆ. ನಮ್ಮ ಮನೆಯಲ್ಲಿ ಈ ರೀತಿ ಅಸ್ಪೃಶ್ಯತೆಯನ್ನು ಒಪ್ಪುವುದಿಲ್ಲ ಅಂತ ಪರಿಪರಿಯಾಗಿ ಹೇಳಿದರೂ ಅವನು, ದರ್ಶನ ಪಾತ್ರಿಗಳ ಮನೆಯ ಒಳಗಡೆ ಹೋಗುವುದು ಸೂಕ್ತ ಅಲ್ಲ ಅಂತ ಸ್ಪಷ್ಟವಾಗಿ ಹೇಳಿ ನಿರಾಕರಿಸಿದ.

          ನನ್ನ ತಂದೆ ಯಾವತ್ತೂ ಅಸ್ಪೃಶ್ಯತೆಯನ್ನು ಮಾಡಿದವರಲ್ಲ. ನಂತರ ನನ್ನ ಹಿರಿಯಣ್ಣ ಶಂಕರನಾರಾಯಣ ಹೆಬ್ಬಾರ್ ದರ್ಶನ ಪಾತ್ರಿಯಾದ ಮೇಲೂ, ಪೌರೋಹಿತ್ಯದಿಂದ ಸಮಯ ಕಳೆಯುತ್ತಿದ್ದರೂ ಅಸ್ಪೃಶ್ಯತೆಯನ್ನು ಯಾವತ್ತೂ ಒಪ್ಪಿದವನಲ್ಲ. ಹಾಗಿದ್ದರೂ ಯಾರೂ ಅವನ ಜೊತೆಗೆ ಸರಿಸಮನಾಗಿ ಕುಳಿತು ಅಥವಾ ಪಕ್ಕದಲ್ಲಿ ಕುಳಿತು ಆಹಾರಾದಿಗಳನ್ನು ಸೇವಿಸುವ ಯೋಚನೆಯನ್ನು ಕೂಡ ಮಾಡಿಲ್ಲ. ಯಾಕೆಂದರೆ ನನ್ನ ಅಪ್ಪ ಹೋಟೇಲ್ ನಲ್ಲಿ ಯಾವತ್ತೂ ಆಹಾರ ಸೇವಿಸಿದವರಲ್ಲ. ಹೋಟೇಲಿನಲ್ಲಿ ಆಹಾರ ಸೇವಿಸಿ ಕಾರ್ಯಕ್ರಮಾದಿಗಳಲ್ಲಿ ಕಪಟ ಮಡಿವಂತಿಕೆಯನ್ನು ಮಾಡುವ ಇತರೆ ಕೆಲವರಂತೆ ಅವರಿರಲಿಲ್ಲ.

ಗಿಡ ನೆಡುವಾಗ ನನ್ನನ್ನು ಕರೆದುಕೊಂಡು ಹೋಗಿದ್ದರು.

ಪ್ರತಿ ಹುಣ್ಣಿಮೆಗೆ ಶ್ರೀಚಕ್ರಪೂಜೆಗಾಗಿ ಉಡುಪಿಯ ಶ್ರೀಪತಿ ತಂತ್ರಿಗಳ ಮನೆಗೆ ಹೋಗುತ್ತಿದ್ದರು

ಪ್ರತಿದಿನ ನೈವೆದ್ಯದ ಬೆಳ್ತಿಗೆ ಅನ್ನದ ಲಡ್ಡುಕಗಳನ್ನು ಸಣ್ಣ ಮಕ್ಕಳೆಲ್ಲರಿಗೂ ಕೊಡುತ್ತಿದ್ದರು.

ಪ್ರತಿವರ್ಷ ಚಂಡೀಹೋಮ, ರಾಮನವಮಿ, ಆಷಾಡದಲ್ಲಿ ದುರ್ಗಾ(ಸಪ್ತಶತೀ)ಪೂಜೆ ಮಾಡಿಸಿ ನೂರಾರು ಜನರಿಗೆ ಊಟ ಹಾಕುತ್ತಿದ್ದರು. (ಈಗಲೂ ಅವು ನಮ್ಮ ಅಣ್ಣನವರ ಉಸ್ತುವಾರಿಯಲ್ಲಿ ನಡೆಯುತ್ತವೆ.)

ಪ್ರತಿವರ್ಷ ಕೊಡಚಾದ್ರಿಗೆ ಹೋಗಿ ಎರಡು ಮೂರು ದಿನ ಧ್ಯಾನ ಮಾಡಿ ಬರುತ್ತಿದ್ದರು.

Friday, March 22, 2024

ನನ್ನ ಬದುಕಿನ ಹಾದಿ

 ಮಾತೃದೇವೋ ಭವ

ನನ್ನ ಅಮ್ಮ

ನನ್ನ ಅಮ್ಮ ನನ್ನ ಪಾಲಿನ ದೇವತೆ.  ಪ್ರೀತಿಯೇ ಮೈವೆತ್ತಿರುವ ಮಹಿಳೆ. ಹನ್ನೊಂದು ಹೆತ್ತರೂ ಬತ್ತದ ಬದುಕಿನ ಭರವಸೆಯ ಭಾವ. ಹೆಸರು ಮೀನಾಕ್ಷಿ. 

ಮಕ್ಕಳಿಗಾಗಿ ಎನೇನು ಮಾಡಿಲ್ಲ ? 

ಬೆಳಿಗ್ಗೆ ಉಷಃಕಾಲದಲ್ಲೇ ಎದ್ದು 

"ರಂಗ ನಾಯಕ ರಾಜೀವ ಲೋಚನ

ರಮಣನೇ ಬೆಳಗಾಯಿತೇಳೆನ್ನುತ"

 ಮುಂತಾದ ಭಕ್ತಿಗೀತೆಗಳನ್ನು ಇಂಪಾಗಿ ಹಾಡುತ್ತ ದೇವರಿಗೆ ದೀಪ ಹಚ್ಚಿ ಕೊಟ್ಟಿಗೆಗೆ ಹೋಗಿ ದನಗಳಿಗೆ ಹುಲ್ಲು ಹಾಕಿ  ಹಾಲು ಕರೆದು ಬರುತ್ತಾಳೆ್. ಬೆಳಿಗ್ಗೆ ನಾನು ಅರೆ ನಿದ್ರೆಯಲ್ಲಿ ಅವಳ ಜೊತೆಗೆ ಮಲಗಿದವ ಎಲ್ಲದನ್ನೂ ಕೇಳ್ತಿದ್ದೆ. ಎದ್ದರೆ ಅವಳು ಹಾಡು ಹಾಡುವುದನ್ನು ನಿಲ್ಲಿಸಿಯಾಳೆಂಬ ಭಯ. ಅವಳು ಹಾಡು ಮುಗಿಸಿ ಬೇರೆ ಕಡೆ ತಿರುಗಿದಾಗ  ಅಷ್ಟೇ ಇಂಪಾಗಿ  ಶೀಟಿ ಹೊಡೆದಂತೆ ಹಾಡುವ ಹಕ್ಕಿ. ಅದರ ಇಂಪಾದ ದನಿಯನ್ನು ಬಾಲ್ಯದ ಆ ದಿನಗಳಲ್ಲಿ ಯಾವಾಗಲೂ ಸವಿಯುವ ಅದೃಷ್ಟ ನನ್ನದಾಗಿತ್ತು.

ಒಲೆಗೆ ಬೆಂಕಿ ಹಾಕಿ ಒಂದು ಕಪ್ಪಾದ ಚರಿಗೆಯಲ್ಲಿ ಕಾಫಿ ಗೆ ನೀರು ಇಟ್ಟು ಬೆಲ್ಲ ಕಾಫಿ ಪುಡಿ ಹಾಕಿ ಹೋದರೆ ಹಾಲು ಕರೆದು ಬರುವಾಗ ಅದು ಕುದಿಯುತ್ತಿರುತ್ತದೆ ಅದಕ್ಕೆ ನಾಲ್ಕು ಲೊಟ ಹಾಲು ಹಾಕಿದರೆ ಮನೆಯ ಎಲ್ಲರಿಗೂ ಆಗುವಷ್ಟು ಕಾಫಿ ರೆಡಿ. ಜೊತೆಗೆ ಕಾಫಿಯ ಪಾತ್ರೆ ಯನ್ನು ಒಲೆಯಿಂದ ಕೆಳಗೆ ಇಳಿಸಿದ ಕೂಡಲೇ ದೋಸೆಯ ಕಾವಲಿ ಅದರ ಜಾಗವನ್ನು ಪಡೆಯುತ್ತಿತ್ತು. ದೂರದ ಶಾಲೆಗೆ ಹೋಗುವ ಅಣ್ಣ ಅಕ್ಕಂದಿರಿಗೆ ಕೂಡಲೇ ತಿಂಡಿ ಆಗಬೇಕು. ನಮ್ಮ ಮನೆಯ ಪಡಸಾಲೆಗೆ ಹೊಂದಿಕೊಂಡಂತೆ ಇದ್ದ ಇಲ್ಲ್ (ಅಡಿಗೆಮನೆ)ನಲ್ಲಿ ಎಲ್ಲರೂ ಸಾಲಾಗಿ ತಿಂಡಿಗಾಗಿ ಕುಳಿತಿರುತ್ತಿದ್ದೆವು. ಅಮ್ಮ ದೋಸೆಯನ್ನು ಬೇಗ ಬೇಗ ಮಾಡಿ ಹಾಕಿದರೂ ಶಾಲೆಗೆ ಹೋಗುವ ತರಾತುರಿಯಲ್ಲಿರುವ ಅಣ್ಣಂದಿರಿಗೆ ದೋಸೆ ಹಾಕಬೇಕು. ಹಾಗೆ ನನ್ನಂತ ಸಣ್ಣ ಮಕ್ಕಳನ್ನು ಸಂಭಾಳಿಸಬೇಕು. ನಮಗೆ ದೋಸೆ ಹಾಕದಿದ್ದರೆ ನಾವು ಅಳುತ್ತೇವೆ, ಅಥವಾ ಕಿರಿಚುತ್ತೇವೆ. ಅಣ್ಣಂದಿರು ಅವರವರ ಶಾಲೆಗೆ ಹೊರಡಬೇಕಾಗುವುದರಿಂದ ತಿಂಡಿಗಾಗಿ  ಅವಸರಪಡಿಸುತ್ತಾರೆ. ಒಟ್ಟಾರೆ ಎಲ್ಲರಿಗೂ ಏಕಕಾಲದಲ್ಲಿ ದೋಸೆ ಬೇಕು.  ಅಮ್ಮ ಅದನ್ನು ಪ್ರತಿದಿನ ಹೇಗೆ ನಿಭಾಯಿಸಿರಬಹುದು ? ಈಗ ೪೫ ವರ್ಷಗಳ ನಂತರ ಯೋಚಿಸಿದರೆ ಅಮ್ಮನ ತಾಳ್ಮೆಯ ಎಷ್ಟಿತ್ತೆಂದು ಗೊತ್ತಾಗುತ್ತದೆ. ಈಗ ಒಂದೆರಡು ಮಕ್ಕಳನ್ನು ಶಾಲೆಗೆ ಹೊರಡಿಸುವಾಗಲೇ ತಾಯಿಯಂದಿರಿಗೆ ಸುಸ್ತಾಗಿರುತ್ತದೆ.(ತಾಯಿಯಂದಿರು ಈಗಲೂ ಒಂದೆರಡು ಮಕ್ಕಳಿಗಾಗಿ ಮಾಡುವ ಇಂತಹ ಕೆಲಸ ಸ್ತುತ್ಯರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ)

ಅಮ್ಮನಿಗೆ ಓದಲು ಬರೆಯಲು ಬರುವುದಿಲ್ಲ. ಆದರೆ ಅವಳಿಗೆ ಶಿಕ್ಷಿತರಿಗಿಂತ ಎಷ್ಟೊ ಹೆಚ್ಚು ಭಜನೆಗಳು ಶೋಭಾನೆ ಹಾಡುಗಳು ಗೊತ್ತಿದ್ದವು. ಯಾವ ಶಿಕ್ಷಿತರಿಗೂ ಗೊತ್ತಿರುವುದಕ್ಕಿಂತ ಹೆಚ್ಚು ಪೌರಾಣಿಕ ಕಥೆಗಳು ಅಮ್ಮನಿಗೆ ಗೊತ್ತಿದ್ದವು.

 ಅಪ್ಪ ಮತ್ತು ಹಿರಿಯ ಅಣ್ಣಂದಿರು ಅಗಾಗ ಯಕ್ಷಗಾನದ ಆಟಕ್ಕೆ ಹೋಗಿ ಬರುತ್ತಿದ್ದರು. ಆಗಿನ ಕಾಲದಲ್ಲಿ ಹೆಬ್ರಿಯಲ್ಲಿ ಪ್ರತಿದಿನ ಒಂದಲ್ಲ ಒಂದು ಮೇಳದ ಆಟ ಇರುತ್ತಿತ್ತು. ಸಾಮಾನ್ಯವಾಗಿ ಸಾಲಿಗ್ರಾಮ ಮೇಳ ಮತ್ತು ಪೆರ್ಡೂರು ಮೇಳ ಪ್ರಸಿದ್ಧ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳೇ ಹೆಚ್ಚು. ಅಲ್ಲಲ್ಲಿ ದೇವಸ್ಥಾನಗಳಲ್ಲಿ ಬಯಲಾಟಗಳೂ ಇರುತ್ತಿದ್ದವು. ಇನ್ನು ಕೆಲವು ಕಡೆ ಕಟೀಲು ಮೇಳದ, ಧರ್ಮಸ್ಥಳ ಮೇಳದ ಅಥವಾ ಮಂದರ್ತಿ ಮೇಳದ ದೇವಿಮಹಾತ್ಮೆ ಮೊದಲಾದ ಪ್ರಸಂಗಗಳಿರುತ್ತಿದ್ದವು. ಇದನ್ನು ನೋಡಲು ಹೆಬ್ರಿಯ ತನಕ ನಡೆದುಕೊಂಡೇ ಹೋಗಬೇಕು. ದೂರ ಕೇವಲ ೧೨ ಕಿ.ಮೀ. ಸಂಜೆ ಹೊರಟರೆ ಬೆಳಿಗ್ಗೆ ಏಳು ಗಂಟೆಗೆ ವಾಪಾಸು ಬರುತ್ತಿದ್ದರು. ರಾತ್ರಿ ೯.೩೦ ರಿಂದ ಬೆಳಿಗ್ಗೆ ೫/೬ ಗಂಟೆಯ ತನಕ ಆಟ ನಡೆಯುತ್ತಿತ್ತು. ಅಣ್ಣಂದಿರು ಅಥವಾ ಅಪ್ಪ ಆಟ ನೋಡಿ ಬಂದವರು ಪೂರ್ಣ ಕಥೆಯನ್ನು ತಿಂಡಿ ತಿನ್ನುವಾಗ ಹೇಳಿ ಮುಗಿಸುತ್ತಿದ್ದರು. ಅಮ್ಮ ಅದೆಲ್ಲವನ್ನೂ ನೆನಪಿಟ್ಟುಕೊಂಡಿರುತ್ತಿದ್ದಳು.

ನಾನು ೪ ನೇ ತರಗತಿಯಲ್ಲಿ(೧೯೮೬) ಇದ್ದಾಗ ಮೊದಲ ಬಾರಿ ೯ ಕಿ.ಮೀ. ದೂರದ ಕಾಡಿನ ದಾರಿಯ  ಮುನಿಯಾಲಿಗೆ ಗೆಳೆಯರ ಜೊತೆಗೆ ಆಟ ನೋಡಲಿಕ್ಕೆ ಹೋಗಿದ್ದೆ. ಆಗ ನೆಲ ಟಿಕೆಟು ರೂ. ಎರಡು ಇತ್ತು.  ಆಟದ ಷ್ಟೇಜಿನ ಪಕ್ಕೆಲಗಳಲ್ಲಿ ನೆಲದ ಮೇಲೆ ಕುಂಟಲ್ದ ಸೊಪ್ಪುಗಳನ್ನು ಕಡಿದು ಹರಡಿ ಹಾಕಿರುತ್ತಿದ್ದರು. ಅದರಲ್ಲೇ ಕುಳಿತುಕೊಳ್ಳಬೇಕು. ಎಲ್ಲರೂ ಹೊದೆಯಲಿಕ್ಕೆ ಎನಾದರೂ ತಂದುಕೊಳ್ಳುತ್ತಿದ್ದರು. ಸೊಪ್ಪು ಮೊದಲೇ ತಂಡಿಯಾಗಿರುತ್ತದೆ. ರಾತ್ರಿಯ ಹೊತ್ತು ಸಮಯ ಕಳೆದಂತೆ ತಂಡಿ ಹೆಚ್ಚಾಗುತ್ತಾ ಹೊಗುತ್ತದೆ. ಮಧ್ಯರಾತ್ರಿಯ ಹೊತ್ತಿಗೆ ನಮಗೆಲ್ಲ ನಿದ್ರೆಯೋ ನಿದ್ರೆ, ನಡು ನಡುವೆ ಚಂಡೆಯ ಶಬ್ದಕ್ಕೆ ಎಚ್ಚರವಾದರೂ ಕಣ್ಣು ಬಿಡಲಾಗುವುದಿಲ್ಲ. ಹಸಿಸೊಪ್ಪಿನ ಹಾಸಿಗೆಯ ಜೊತೆಗೆ ಚಳಿ ಬೇರೆ ನಮ್ಮನ್ನು ಬಹಳ ಪೀಡಿಸುತ್ತಿತ್ತು.  ಆದರೂ ಆಟದ ಚಟ ಬಿಡಬೇಕಲ್ಲ ? ತ್ಕುೋಮಟ ಗೋವಿಂದ ನಾಯಕರ ಹನುಮಂತನ ಪಾತ್ರ ಆ ದಿನಗಳಲ್ಲಿ ಹೆಸರುವಾಸಿಯಾಗಿತ್ತು. ನಾನು ನಿಜವಾಗಲೂ ಅದನ್ನು ನೋಡಿ ಬೆರಗಾದೆ, ಸಂತೋಷಪಟ್ಟೆ.

ಅಮ್ಮ ನನ್ನನ್ನು ಯಾವಗಲೂ ಎಲ್ಲೇ ಹೋದರೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಳು. ಅಥವಾ ನಾನೇ ಅವಳ ಸೆರಗು ಹಿಡಿದು ಓಡುತ್ತಿದ್ದೆ. ಮಧ್ಯಾಹ್ನ ಊಟ ಮಾಡಿದ ಬಳಿಕ ಮೊದಲಿಗೆ ಕೊಳಜ್ಜಿ ಗುಡ್ಡೆಗೆ ಹೋಗಿ ಗೇರು ಬೀಜ ಹೆಕ್ಕಿಕೊಂಡು ಬರ್ಬೇಕು. ಇಲ್ಲದಿದ್ದರೆ ಅದು ಪಕ್ಕದ ಮನೆಯ ಹೆಂಗಸ ಪಾಲಾಗುತ್ತಿತ್ತು. ಬಹಳ ಬಾರಿ ಹೊದಾಗ ಗೇರುಬೀಜ  ಇರ್ತಾನೇ ಇರಲಿಲ್ಲ. ಮೊದಲೇ ಆ ಹೆಂಗಸು ಹೆಕ್ಕಿಕೊಂಡು ಹೋಗಿರುತ್ತಿತ್ತು. ಕಾಲಿ ಹಣ್ಣು(ಬೀಜ ಬೇರ್ಪಡಿಸಿದ್ದು) ಸಾಕ್ಷಿಗೆ ಇರುತ್ತಿತ್ತು. ಆಗ ನಾನು ಅಮ್ಮನನ್ನು ಕೇಳುತ್ತಿದ್ದೆ - "ಯಾಕೆ ಆ ಹೆಂಗಸಿಗೆ ಸೇರಿದ್ದಲ್ಲದಿದ್ದರೂ ನಮಗೆ ಸೇರಿದ ಜಾಗದ ಗೇರು ಬೀಜ ಹೆಕ್ಕಿಕೊಂಡು ಹೋಗುತ್ತದೆ ?" 

ಆಗ ಅವಳು ಆ ಹೆಂಗಸಿನ ಪುರಾಣ ಎಲ್ಲ ಹೇಳುತ್ತಿದ್ದಳು.

"ಸುಮಾರು ೧೬/೧೭ ವರ್ಷಗಳ ಹಿಂದಿನ ತನಕ  ನನ್ನ ಮನೆ ಏಗಿರುವಲ್ಲಿ ಇರಲಿಲ್ಲ. ನಾವು ಹಿಸೆ ಮಾಡಿಕೊಂಡ ಮೇಲೆ ಇಲ್ಲೇ ಕೆಳಗಿನ ಬೆಟ್ಟುಗದ್ದೆಯಲ್ಲಿ ಮುಳಿಮಾಡಿನ ಮನೆಯಲ್ಲಿ ವಾಸ ಮಾಡಿದ್ದೆವು. ಒಂದು ಬಾರಿ ೧೭ ವರ್ಷಗಳ ಹಿಂದೆ ಆ ಮನೆಗೆ ಬೆಂಕಿ ಬಿತ್ತು. ನಮ್ಮ ವರ್ಷದ ಬೆಳೆ ಸುಮಾರು ೫/೬ ಕ್ವಿಂಟಲ್ ಅಕ್ಕಿ ಅಲ್ಲಿಂದ ಹೇಗೇಗೋ ಸಾಗಿಸಿ ಆ ಹೆಂಗಸಿನ ಮನೆಯ ಉಪ್ಪರಿಗೆಯಲ್ಲಿ ಅಪ್ಪ ಇಡಿಸಿದರು. ಆದರೆ ಮೂರ್ನಾಲ್ಕು ತಿಂಗಳು ಕಳೆದು ಅಲ್ಲಿಗೆ ಹೋದಾಗ ೧ ಕ್ವಿಂಟಲ್ ಅಕ್ಕಿ ಕೂಡ ಅಲ್ಲಿ ಇರಲಿಲ್ಲ. ಆ ಹೆಂಗಸನ್ನು ಕೇಳಿದರೆ "ನೀವೇ ತಾನೆ ಅಲ್ಲಿ ಇಟ್ಟಿರೋದು. ನಾನು ಯಾವತ್ತೂ ಉಪ್ಪರಿಗೆಗೆ ಹೋದದ್ದೇ ಇಲ್ಲ. ನೀವಿಟ್ಟಿದ್ದನ್ನು ನೀವೇ ಈಗ ನೋಡುತ್ತಿದ್ದೀರಿ. ನಿಮ್ಮದು ನಿಮಗೆ. ನಮ್ಮದು ನಮಗೆ. ಉಳಿದದ್ದೇನೂ ನನಗೆ  ಗೊತ್ತಿಲ್ಲ." ಅಂದುಬಿಟ್ಟಳು.

 ಎಂಥಾ ಮೋಸ !!!. ಆ ರೀತಿ ಮೋಸ ಮಾಡಿದ ಹೆಂಗಸು ಹೇಗೆ ತಾನೇ ಗೇರು ಬೀಜ ಮುಟ್ಟದಿರಲು ಸಾಧ್ಯ. ಆದರೆ ನಮ್ಮಮ್ಮನಿಗೆ ಏನೋ ಸ್ವಲ್ಪ ಆದರೂ ಕಳ್ಳರಿಂದ ಉಳಿಸಿಕೊಳ್ಳಬೇಕೆಂಬ ಹಪಹಪಿ.

ಅವಳ ಜೊತೆ ಹೋದಾಗ ಗೇರುಹಣ್ಣು ನನಗೆ. ಬೀಜ ಅವಳ ಬುಟ್ಟಿಗೆ. ಹಣ್ಣಿನ ರಸ ಮುಕ್ಕಾಲುಭಾಗ ಹೊಟ್ಟೆಯೊಳಗಾದರೆ ಕಾಲುಭಾಗ ಹೊಟ್ಟೆಯ ಹೊರಭಾಗಕ್ಕೆ !!!  ಆಮೇಲೆ ಮನೆಗೆ ಬಂದ ಮೇಲೆ ಅಮ್ಮ ನನಗೆ ಸ್ನಾನ ಮಾಡಿಸುತ್ತಿದ್ದಳು.

ಅವಳು ಅಪ್ಪನಂತೆ ಆಗಾಗ ಸಂಪಿಗೆಯ ದೊಡ್ಡಪ್ಪನ ಮನೆಗೆ ಹೊಗುತ್ತಿದ್ದಳು. ಹೋದರೆ ರಾತ್ರಿ ಅಲ್ಲಿ ಹಾಲ್ಟ್ ಅಂತಾನೇ ಅರ್ಥ. ಅಲ್ಲಿಯ  ದೊಡ್ಡಮ್ಮನೂ ಮೀನಾಕ್ಷಿಯೇ. ಇಬ್ಬರು ಮೀನಾಕ್ಷಿಯರು ಪೂರ್ತಿ ಸಮಾಧಾನ ಆಗುವಷ್ಟು  ಹಗಲುರಾತ್ರಿ ಒಂದು ಮಾಡಿ ಮಾತಾಡಿ ಮಲಗುತ್ತಿದ್ದರು. ನಾನು ರಾತ್ರಿ ಬೇಗ ಮಲಗಿ ಬಿಡುತ್ತಿದ್ದೆ. ದೊಡ್ಡಮ್ಮನಿಗೂ ಬರೊಬ್ಬರಿ ಹತ್ತು ಮಕ್ಕಳು. ಆದರೆ ನಾನು ಹೋಗುವ ವೇಳೆ ಅವರ ಕೊನೆಯ ಮಗಳು ಸುಮ ಮದುವೆ ವಯಸ್ಸಿಗೆ ಬಂದ ಕನ್ಯೆ ಆಗಿದ್ದಳು. ಕೊನೆಯ ಮಗ ಕುಮಾರಣ್ಣ ಡಿಗ್ರೀ ಓದುತ್ತಿದ್ದರು. ಮೋಹನ ಅಣ್ಣ ಆಗ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಚಂದ್ರಶೇಖರ ಅಣ್ಣ ಡಿಗ್ರೀ ಮುಗಿಸಿ ಮನೆಯ ಜಮೀನಿನ ಉಸ್ತುವಾರಿ ವಹಿಸಿಕೊಂಡಿದ್ದರು. ಜಗ್ಗಣ್ಣ ಪಿ.ಡಬ್ಲ್ಯೂ.ಡಿ ಯಲ್ಲಿ ಕೆಲಸದಲ್ಲಿದ್ದರು. ಗೋವಿಂದಣ್ಣ ನೆಲ್ಲಿಬೆಟ್ಟ್ ನಲ್ಲಿ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಹಿರಿಯರಾದ ರಾಮಣ್ಣನ ಮುಖನೋಡಿದ ನೆನಪೂ ಕೂಡ ನನಗೆ ಇಲ್ಲ. ಅವರು ಬೆಂಗಳೂರಿನಲ್ಲಿ ನಾನು ಹುಟ್ಟುವ ಮೊದಲೇ ಸೆಟ್ಲಾಗಿದ್ದರು.

ಬೆಳಿಗ್ಗೆ ಸಂಪಿಗೆಯಲ್ಲಿ ತಿಂಡಿಯದ್ದೇ ಸೊಗಸು. ಯಾಕೆಂದರೆ ದೊಡ್ಡಮ್ಮ ಯಾರೆ ಒಳಗಿನ  ಕೆಲಸಕ್ಕೆ ಇದ್ದರೂ ಹಾಲು ಮೊಸರು ಬೆಣ್ಣೆ ತುಪ್ಪದ ಕೆಲಸ ಖುದ್ದಾಗಿ ತಾವೇ ಮಾಡುತ್ತಿದ್ದರು. ದೊಡ್ಡದಾದ ಕಲಾಯಿ ಹಾಕಿದ ಹಿತ್ತಾಳೆಯ ಚರಿಗೆಯಲ್ಲಿ ಬೆಳಿಗ್ಗೆ ಕಡಗೋಲಿಗೆ ಆರುಸುತ್ತು ಹಗ್ಗ ಸುತ್ತಿ ಒಂದು ಸ್ಟೂಲ್ ನಲ್ಲಿ ಕೂತು ಮಜ್ಜಿಗೆ ಕಡೆದರೆ ಪುಷ್ಕಳವಾಗಿ ಬರುವ ತಾಜಾ ಬೆಣ್ಣೆ(ಸಂಸ್ಕೃತದಲ್ಲಿ ಹೈಯಂಗವೀನ ಅಂತಾರೆ)ಯಲ್ಲಿ ಒಂದು ದೊಡ್ಡ ಬೆಣ್ಣೆಮುದ್ದೆಯನ್ನು ತಿಂಡಿ ತುನ್ನುತ್ತಿದ್ದ ನನ್ನ ಬಾಳೆಲೆಗೆ ಹಾಕುತ್ತಿದ್ದರು. ನನಗೆ ಸ್ವರ್ಗವೇ ಅದು ಎಂಬಂತೆ ಅನುಭವ.  

ಆಗ ಅವರ ಮನೆಯಲ್ಲಿ ಡೇರಿಗೆ ಹಾಲು ಹಾಕುತ್ತಿರಲಿಲ್ಲ. ನಮ್ಮ ಮನೆಯ ಹತ್ತಿರದಲ್ಲೇ ಹೊಸದಾಗಿ ಡೇರಿ ಆಗಿದ್ದರಿಂದ ಹಾಲು ಮಜ್ಜಿಗೆಗೆ ಕೊರತೆ ಇಲ್ಲದಿದ್ದರೂ ಪುಷ್ಕಳವಾಗಿರುತ್ತಿರಲಿಲ್ಲ. ಯಾಕೆಂದರೆ ಡೇರಿಗೆ ಹಾಲು ಹಾಕದಿದ್ದರೆ ಮುಂದೆ ಅದು ಮುಚ್ಚಿ ಹೋಗುತ್ತದೆ ಎಂಬ ಭಯ ಹತ್ತಿರದವರೆಲ್ಲರಿಗೂ.