Sunday, May 5, 2024

ನಮ್ಮ ಶಾಲೆ

 

ನಮ್ಮ ಶಾಲೆ

ಮೇಲ್ಮಠದ ಎದುರಿನ ಅಂಗಳದ ಉತ್ತರದಲ್ಲಿ ಎತ್ತರದಲ್ಲಿ ಒಂದು ಸಣ್ಣ ಶಾಲೆ ಇತ್ತು. ಅದರಲ್ಲಿ ೨೦/೩೦ ಅಡಿ ಉದ್ದದ ಒಂದೇ ಕೊಠಡಿ ಇದ್ದದ್ದು. ಇನ್ನೊಂದು ಕಡಿಮಾಡಿನಡಿಯಲ್ಲಿ ಸಣ್ಣ ಕೊಠಡಿಯಿತ್ತು. ಅದನ್ನು ಯಾರಾದರೂ ಹೊರಗಿನ/ಪರವೂರಿನ ಉಪಾಧ್ಯಾಯರು ಬಳಸುತ್ತಿದ್ದರು.

ನಾನು ಶಾಲೆಗೆ ೫ನೇ ವರ್ಷಕ್ಕೆ ಹೋಗಲು ಆರಂಭಿಸಿದ್ದೆ. ನನ್ನ ಅಣ್ಣಂದಿರಿಬ್ಬರು ಅಕ್ಕಂದಿರಿಬ್ಬರು ಆಗ ಆ ಶಾಲೆಗೆ ಹೋಗುತ್ತಿದ್ದರು. ನಾನಿನ್ನೂ ಒಂದನೇ ತರಗತಿಗೆ ಸೇರಿರಲಿಲ್ಲ. ಶಾಲೆಯ ಒಬ್ಬರೇ ಒಬ್ಬರು ಮಾಸ್ಟರ್ ಆದ ವೃದ್ಧ ವೆಂಕಪ್ಪ ಹೆಬ್ಬಾರ್ ರವರು ನನಗೆ ಸ್ಲೇಟ್ನಲ್ಲಿ ಅ ಆ ಇ ಈ ಎಂಬ ಅಕ್ಷರಗಳನ್ನು ದೊಡ್ಡದಾಗಿ ಬರೆದು ಕೊಡುತ್ತಿದ್ದರು. ನಾನು ಅದನ್ನು ಹೊರಗಿನ ಜಗಲಿಯಲ್ಲಿ ಕುಳಿತು ಮತ್ತೆ ಮತ್ತೆ ತಿದ್ದಿ ಬರೆಯಬೇಕಿತ್ತು. ಹಾಗೆ ತಿದ್ದಿ ತಿದ್ದಿ ಮದ್ಯಾಹ್ನ ಆಗುವಾಗ ಗೋಣಿ ದಾರದಷ್ಟು ದಪ್ಪಗಾದ ನಾಲ್ಕು ಅಕ್ಷರಗಳು ತಯಾರಾಗುತ್ತಿದ್ದವು.

ಶಾಲೆಗೆ ಹೋಗುವಾಗ ಮಳೆಗಾಲದಲ್ಲಿ ನಮಗೆ ೫ ಮಂದಿ ಅಣ್ಣ ತಮ್ಮಂದಿರಿಗೆ ಅಕ್ಕತಂಗಿಯರಿಗೆ ಕೊಡೆ ಎಲ್ಲಿಂದ ತರಬೇಕು. ಆಗ ಪ್ರಾಯಶಃ ನಮ್ಮೂರಲ್ಲಿ ಮನೆಗೊಂದು ಕೊಡೆ ಇರ್ತಿತ್ತೋ ಇಲ್ವೋ ? ಜಾರ್ನಬೇಟ್ಟಿನ ಅಜ್ಜಿ ಲಕ್ಷ್ಮ್ಯಕ್ಕ ಯಾವಗಲೂ ಮರಸಣಿಗೆಯ ದೊಡ್ಡ ಎಲೆಯನ್ನು (ದಂಟು ಸಮೇತ ಕತ್ತರಿಸಿ)  ಹಿಡಿದುಕೊಂಡೇ ಎಲ್ಲಾ ಕಡೆ ಓಡಾಡುತ್ತಿದ್ದರು. ಪ್ಲಾಸ್ಟಿಕ್ ನ ಕೊಪ್ಪೆ ತಯಾರಿಸಿ ಬಹುಶಃ ಹೆಚ್ಚಿನ ಮಕ್ಕಳು ಮಳೆಗಾಲದಲ್ಲಿ ಬಳಸುತ್ತಿದ್ದರು. ನಮಗೂ ಅದೇ ಛತ್ರಿ. ನಾನಂತೂ ಇನ್ನೂ ಸೇಫ್ ಹೇಗಂತೀರಾ ? ಇಬ್ಬರು ಅಕ್ಕಂದಿರು ಒಂದು ಪ್ಲಾಸ್ಟಿಕ್ ನ್ನು ಮುಂದೆ ಒಬ್ಬಳು ಹಿಂದೆ ಒಬ್ಬಳು ಅಂತ ಎಳೆದು ಇಡಿದುಕೊಳ್ಳುತ್ತಿದ್ದರು. ನಾನು ಅವರಿಬ್ಬರ ನಡುವೆ ಸೇಫ್. ಆಗ ಆಳುಗಳೂ ಕೂಡ ಪ್ಲಾಸ್ಟಿಕ್ ನ ಕೊಪ್ಪೆಯನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಅದರೆ ಕೊಟ್ರಾಕ್ಯಾರ್ ದಾಟಿ ಕೆಳಸುಳಿಗೋಡಿನ(ಹಿತ್ತಲ್ಲದ) ಪಾಚಿ ತುಂಬಿದ ಸಂಕದಲ್ಲಿ(ಪಾಪು) ದಾಟುವುದು ತುಂಬ ಅಪಾಯದ ಕೆಲಸ ಆಗಿತ್ತು.

ನೆಟ್ಟಿಗಾಗುವಾಗ ಬಳಸುತ್ತಿದ್ದ ಕೊರಂಬು ತುಂಬ ಹಿತಕರ ಸಾಧನ ಆಗಿತ್ತು. ಪ್ಲಾಸ್ಟಿಕ್ ನ ಬಳಕೆ  ಆಗ ತೀರ ಕಡಿಮೆ ಇತ್ತು. ಕೊಡೆಗಳೂ ಹೆಚ್ಚಾಗಿ ಮರದ/ಬೆತ್ತದ ಜೆಲ್(ಹಿಡಿ ಮತ್ತು ಮಧ್ಯದ ಸಲಾಕೆ)ನವುಗಳೇ ಆಗಿದ್ದವು. ಅವುಗಳಲ್ಲಿ ಬಳಸು ಬಟ್ಟೆಯೂ ಕಪ್ಪಿನ ಕಾಟನ್(ಹತ್ತಿ)ಬಟ್ಟೆಯೇ ಆಗಿತ್ತು. ಅದು ಮಳೆ ಬಿಟ್ಟ ಮೇಲೆ ಒಣಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿತ್ತು. ನಂತರ ನಾನು ೫ ನೇ ತರಗತಿಯಲ್ಲಿದ್ದಾಗ ಟೆರಿಕಾಟ್ ಬಟ್ಟೆಯನ್ನು ಬಳಸಿದ ಬಟನ್ ನ ಕೊಡೆಗಳು ಮಾರುಕಟ್ಟೆಗೆ ಬರಲು ಆರಂಭಿಸಿದವು.

ನನಗೆ  ಆರು ವರ್ಷವಾದ ಬಳಿಕ ವೆಂಕಪ್ಪ ಹೆಬ್ಬಾರ್ ರು  ನನಗೆ ಒಂದನೇ ತರಗತಿ ಗೆ ಪ್ರವೇಶ ಕೊಟ್ಟರು. ಆಗ ನನ್ನ ತರಗತಿಯಲ್ಲಿ ಒಟ್ಟು ಎಂಟು ಜನ ಮಾತ್ರ ವಿದ್ಯಾರ್ಥಿಗಳು ಇದ್ದರು.

No comments:

Post a Comment