(ಇದರ ಹಿಂದೆ ಮತ್ತು ಮುಂದೆ ಬರೆದಿರುವ ಕಥಾನಕ ಇದೆ. ಕಾಲಾಂತರದಲ್ಲಿ ಅವನ್ನೂ ಇಲ್ಲಿ ಹಾಕುತ್ತೇನೆ)
೭. ದೆಹಲಿಯಲ್ಲಿ ಪರೀಕ್ಷಾವಿಭಾಗದ ಕೆಲಸ
ಮಾರ್ಚ್ ತಿಂಗಳ ೧೫ ೧೬, ೧೭ ನೇ ತಾರೀಕಿನಂದು
ದೆಹಲಿಯಲ್ಲಿ ಪರೀಕ್ಷಾವಿಭಾಗದಲ್ಲಿ ಗೋಪನೀಯ ಕೆಲಸವಿತ್ತು. ಅದಕ್ಕಾಗಿ
ಪರೀಕ್ಷಾನಿಯಂತ್ರಕರಾದ ಕರ್ನಾಟಕದವರೇ ಆದ ಪ್ರೊ. ಈಶ್ವರ ಭಟ್ಟರು ಕರೆದಿದ್ದರು. ಭಾರತದಲ್ಲಿ
ಕೊರೋನ ಪ್ರವೇಶಿಸಿ ಅದಾಗಲೇ ತಿಂಗಳು ಕಳೆದಿತ್ತು. ಆದರೆ ವ್ಯಾಪಕವಾಗಿ ಹರಡಬಹುದೆಂಬ ಗುಮಾನಿ
ಯಾರಿಗೂ ಇರಲಿಲ್ಲ. (ಮೋದಿಜೀ ಯವರ ನೇತೃತ್ವದಲ್ಲಿ ಸರಕಾರದ ಕಡೆಯಿಂದ ವ್ಯಾಪಕ ಸಿದ್ಧತೆಗಳು
ಗೌಪ್ಯವಾಗಿ ನಡೆಯುತ್ತಲೇ ಇದ್ದವು. ವೈದ್ಯರಿಗೆ ಮತ್ತು ದಾದಿಯರಿಗೆ ಟ್ರೈನಿಂಗ್ ನಿಂದಾರಂಭಿಸಿ ಬಹಳಷ್ಟು ಕೆಲಸಕಾರ್ಯಗಳು
ತಿಂಗಳ ಹಿಂದಿನಿಂದಲೇ ನಡೆಯುತ್ತಿದ್ದವು. ದೇಶದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಲಕ್ಷಾಂತರ
ಡಾಕ್ಟರುಗಳು ಮತ್ತು ದಾದಿಯರಿಗೆ ತುರ್ತಾಗಿ ಟ್ರೈನಿಂಗ್ ಕೊಡುವುದೆಂದರೆ ಸುಲಭದ ಮಾತಲ್ಲ.
ಮುಖಗವಸ, ಪಿ.ಪಿ.ಇ. ಕಿಟ್ ಮತ್ತು ಸಾನಿಟೈಸರ್ ಮುಂತಾದ ಮೂಲಭೂತ ಪರಿಕರಗಳೂ ಸಹ ನಮಗೆ
ಚೀನದಿಂದಲೇ ಬರಬೇಕಾಗಿತ್ತು. ಏಕೆಂದರೆ
ಕೊರೋನವನ್ನು ೫ ತಿಂಗಳಿನಿಂದ ಹಿಂದೆಯೇ ಹುಟ್ಟಿಸಿ ಜಗತ್ತಿಗೆ ಹಬ್ಬಿಸಿ ತನ್ನ ಖಜಾನೆ
ತುಮ್ಬಿಸಿಕೊಳ್ಳುವ ಯಾವ ಅವಕಾಶವನ್ನೂ ಚೀನ ತಪ್ಪಿಸಿಕೊಳ್ಳಲು ಸಿದ್ಧವಿರಲಿಲ್ಲ. ಆದರೆ ಮೋದಿಜೀಯವರ
ಸಮರ್ಥ ಆಡಳಿತಕೌಶಲದಿಂದಾಗಿ ಹೆಚ್ಚಿನ ಪರಿಕರಗಳನ್ನು ನಾವು ಭಾರತದಲ್ಲೇ ಮೇಕ್ ಇನ್ ಇಂಡಿಯಾ
ಯೊಜನೆಯಡಿಯಲ್ಲಿ ಅತಿ ಶೀಘ್ರವಾಗಿ
ಉತ್ಪಾದಿಸಿಕೊಳ್ಳಲು ಸಮರ್ಥರಾದೆವು.) ಮೋದಿಜೀ ಮಾರ್ಚ್ ತಿಂಗಳ ೯ ನೇ ತಾರೀಕಿನಂದು ದೇಶದ ಜನರನ್ನು
ಉದ್ದೆಶಿಸಿ “ಕೊರೋನದ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಮುಖಗವಸುಗಳನ್ನು ಎಲ್ಲರೂ ತಪ್ಪದೆ
ಹಾಕಿಕೊಳ್ಳಬೇಕು, ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಪಾಡಿಕೊಂಡು ಪದೇ ಪದೇ ೨೦ ಸೆಕೆಂಡುಗಳತನಕ
ಸಾಬೂನು ಬಳಸಿ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು.” ಎಂಬುದಾಗಿ ಕೇಳಿಕೊಂಡರು. ನಾನು ಅವರ
ಮಾತುಗಳನ್ನು ಬೆಳಗಿನ ರೇಡಿಯೊ ವಾರ್ತೆಯಲ್ಲಿ ಕೇಳಿದೆ.
ಚೀನದ ವುಹಾನ್ ಪಟ್ಟಣದಲ್ಲಿ ಸುಮಾರು ೭೦ ಸಾವಿರ ಜನರು ಕೊರೋನ ಸೋಂಕಿಗೆ ಒಳಗಾಗಿದ್ದಾರೆ ಎಂಬ
ವಾರ್ತೆಯನ್ನು ನಾವು ಕೇಳಿದ್ದೆವು. ಹಾಗೆಯೇ ಅದಕ್ಕೆಲ್ಲಾ ಕಾರಣ ಅಲ್ಲಿಯ ಜನ ಅತಿಯಾಗಿ ಕ್ರಿಮಿ
ಕೀಟಗಳಿಂದ ಹಿಡಿದು ಕಾಡಿನ ಎಲ್ಲಾ ಜಾತಿಯ ಪ್ರಾಣಿ ಪಕ್ಷಿ ಹಾವು ಹುಳ ಹುಪ್ಪಟೆಗಳನ್ನು ಸೇವಿಸುವುದೇ ಎಂದು ನಾವು ಸೋಶಿಯಲ್ ಮೀಡಿಯಾಗಳಿಂದ
ತಿಳಿಯುತ್ತಿದ್ದೆವು. ಅದಕ್ಕೆ ಸಂಬಂಧಿಸಿದ ಬಹಳಷ್ಟು ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ
ಹರಿದಾಡುತ್ತಿದ್ದವು. ಹಾಗೆಯೇ ಚೀನದ ಹವಾಮಾನವೂ ಅತ್ಯಂತ ಶೀತಮಯವಾಗಿರುವುದರಿಂದ ಅಲ್ಲಿ ಕೊರೋನ
ಸಾಯುವುದಿಲ್ಲ. ಭಾರತದಲ್ಲಿ ಉಷ್ಣತೆ ತುಂಬ ಜಾಸ್ತಿ ಇರುವುದರಿಂದ ಇಲ್ಲಿ ಕೊರೋನ ಬಂದರೂ ಆ
ವೈರಸ್ಸು ಬದುಕಿ ಉಳಿಯುವುದೇ ಕಷ್ಟ ಎಂಬ ಮಾತು ವೈದ್ಯರುಗಳ ಬಾಯಿಯಿಂದಲೇ ಬರುತ್ತಿತ್ತು. ೨೫
ಡಿಗ್ರಿಗಿಂತ ಹೆಚ್ಚಿನ ಉಷ್ಣತೆಯಲ್ಲಿ ಕೊರೋನ ಸಾಯುತ್ತದೆ ಎಂದು ವೈದ್ಯಕೀಯ ವರದಿಗಳು
ಬರುತ್ತಿದ್ದುದರಿಂದ ಭಾರತದ ಹೆಚ್ಚಿನ ಭಾಗದಲ್ಲಿ ಸರಾಸರಿ ಗರಿಷ್ಟ ೩೫/೪೦ ಡಿಗ್ರಿ ಉಷ್ಣತೆ
ರುವುದರಿಂದ ಇಲ್ಲಿ ಕೊರೋನದ ಪ್ರವೇಶವೇ ಆಗುವುದಿಲ್ಲ ಎಂಬಂತಹ ವಾತಾವರಣ ಮಾರ್ಚ್ ನಲ್ಲಿ ಇತ್ತು.
ಆದರೂ ಕೇಂದ್ರ ಸರ್ಕಾರದ ಆದೇಶದ ಮೇಲೆ ಬಹಳಷ್ಟು ವಿಮಾನಗಳು ರದ್ದಾಗಿದ್ದವು. ವಿಮಾನದಲ್ಲಿ
ಪ್ರಯಾಣಿಸುವವರ ಸಂಖ್ಯೆಯೂ ತೀರ ಕಡಿಮೆ ಇತ್ತು. ಅದು ನಾವು ಮಾರ್ಚ ೧೫ನೇ ತಾರೀಕಿನಂದು ದೆಹಲಿಯ
ವಿಮಾನ ನಿಲ್ದಾಣದಲ್ಲಿ ನೋಡಿದಾಗ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಮಾಮೂಲಿಯ ಕಾಲುಭಾಗದಷ್ಟೇ
ಪ್ರಯಾಣಿಕರು ಅಲ್ಲಿ ಕಂಡುಬಂದರು.
ನಾನಂತೂ ಭುವನೇಶ್ವರದ ಏರ್ ಪೋರ್ಟ್ ನಲ್ಲಿ ಹೋಗಿಯೇ ಸಾನಿಟೈಸರ್ ಎಂದರೆ ಏನು ಯಾಕಾಗಿ ಅದನ್ನು
ಬಳಸಬೇಕೆಂದು ಆವತ್ತು ತಿಳಿದುಕೊಂಡೆ. ಮಾಸ್ಕ್ ನ್ನು ಸಹ ಅಲ್ಲೇ ಖರೇದಿಸಿದೆ. ಆಗ ಕೇವಲ ನೀಲಿ
ಬಣ್ಣದ ತೆಳ್ಳಗಿನ ೧೦ ರೂಪಾಯಿಯ ಮಾಸ್ಕ್ ೫೦ ರೂಪಾಯಿ ಕೊಟ್ಟು ಖರೀದಿಸಿದೆ.
ದೆಹಲಿಯಲ್ಲಿ ಇಳಿದು ಟ್ಯಾಕ್ಸಿಯಲ್ಲಿ ನಮಗಾಗಿ ಕಾಯ್ದಿರಿಸಿದ ರೂಮುಗಳಿರುವ ಸಿಗ್ನೇಚರ್
ಗ್ರಾಂಡ್ ಹೋಟೆಲ್ ಗೆ ಹೋಗುವಾಗ ಯಾವ ಜನರಲ್ಲೂ ಆತಂಕವಿದ್ದದ್ದು ಕಂಡುಬರಲಿಲ್ಲ. ಹೋಟೇಲ್ ನಲ್ಲಿ
ವಿದೇಶಿಗರೂ ಬಹಳ ಮಂದಿ ಇದ್ದರು. ಆದ್ದರಿಂದ ನಮಗೆ ಸ್ವಲ್ಪ ಅಂಜಿಕೆ ಉಂಟಾಯಿತು. ಎಕೆಂದರೆ ಅಮೇರಿಕ
ಮತ್ತು ಯುರೋಪಿನ ಹೆಚ್ಚಿನ ದೇಶಗಳಲ್ಲಿ ಅದಾಗಲೇ
ಕೊರೋನ ಎಂಟ್ರಿ ಕೊಟ್ಟು ಸಾಕಷ್ಟು ಅನಾಹುತ ಮಾಡಿಯಾಗಿತ್ತು. ನಾವು ಅಲ್ಲಿ ಇದ್ದ ಮೂರು ದಿನ ಜೋಪಾನವಾಗಿಯೇ ಇದ್ದೆವು. ಬೆಳಿಗ್ಗಿನ ಉಪಾಹಾರಕ್ಕೆಂದು
ಹಾಗೇ ರಾತ್ರಿಯ ಊಟಕ್ಕೆ ಗ್ರೌಂಡ್ ಫ್ಲೋರ್ ನ ರೆಷ್ಟೋರೆಂಟ್ ಗೆ ಬಂದಾಗ ಸ್ವಲ್ಪಮಟ್ಟಿಗೆ
ಹೆದರಿಕೆಯಾಗುತ್ತಿತ್ತು. ನಾವು ವಾಶ್ ಬೇಸಿನ್ ನ್ ನ ಬಳಿ ಹೋಗುವಾಗ ಅದಕ್ಕೆ ಒಂದು ಪ್ರತ್ಯೇಕ ಬಾಗಿಲು
ಇತ್ತು. ಅದನ್ನು ತೆಗೆಯುವಾಗ ಅಗಳಿ ಮುಟ್ಟಿದ ಮೇಲೆ ಸೋಪು ಬಳಸಿ ಕೈ ತೊಳೆದುಕೊಳ್ಳುತ್ತಿದ್ದೆವು.
ಆದರೆ ಮತ್ತೆ ಹೊರಗೆ ಬರುವಾಗ ಅದೇ ಅಗಳಿಯನ್ನು ಮತ್ತೆ ಮುಟ್ಟಬೆಕಾಗುತ್ತಿತ್ತು. ಆಗ ವಿದೇಶೀಯರು ಆ
ಅಗಳಿಯನ್ನು ಮುಟ್ಟಿದ್ದರೆ ನಮ್ಮ ಕೈಗೆ ಕೊರೋನ ಅಂಟಿಕೊಳ್ಳಬಹುದು ಎಂಬ ಭಯ ಆಗುತ್ತಿತ್ತು.
ಅದಕ್ಕಾಗಿ ಏನೇನೊ ಸರ್ಕಸ್ ಮಾಡುತ್ತಿದ್ದೆವು.
ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಸೆಮಿನಾರ್ ಹಾಲ್ ನಲ್ಲಿ ಪರೀಕ್ಷೆಗೆ ಸಂಬಂಧಿಸಿದ ಗೋಪನೀಯ ಕೆಲಸ ನಡೆಯುತ್ತಿತ್ತು. ಅಲ್ಲಿಗೆ ಶೃಂಗೇರಿಯಿಂದ
ಚಂದ್ರಕಾಂತ ಭಟ್ಟರೂ ಸಹ ಬಂದಿದ್ದರು. ಅವರು ಪದೇ ಪದೇ ಸಾನಿಟೈಸರ್ ನ್ನು ಕೈಗೆ ಹಾಕಿಕೊಂಡು ಉಜ್ಜಿ
ಹಣೆಗೆ ಕೆನ್ನೆಗೆ ತುಟಿಗೆ ಹಚ್ಚಿಕೊಳ್ಳುತ್ತಿದ್ದರು. ಅವರು ಪ್ರತಿದಿನ ಮನೆಯಲ್ಲಿ ಟಿ.ವಿ.ಯಲ್ಲಿ ವಾರ್ತೆಯನ್ನು ನೋಡುತ್ತಾರೆ.
ಹಾಗಾಗಿ ಅಲ್ಲಿ ತಿಳಿಸಿದ ರೀತಿಯಲ್ಲಿ ಅವರು ಮಾಡುತ್ತಿದ್ದುದರಿಂದ ನಾನೂ ಕೂಡ ಹಾಗೆಯೇ
ಮಾಡಬೇಕು ಎಂದುಕೊಂಡು ಹಾಗೇ ಮಾಡುತ್ತಿದ್ದೆ.
ನಾನು ಪುರಿಗೆ ಅಗತ್ಯವಿರುವಷ್ಟು ಪುಸ್ತಕ ಮತ್ತು ಬಟ್ಟಿಗಳನ್ನು ಹೊರತುಪಡಿಸಿ ಯಾವುದೇ ಇತರ
ವಸ್ತುಗಳನ್ನು ತೆಗೆದುಕೊಂಡು ಹೋಗಿರಲಿಲ್ಲ.
ದೆಹಲಿಗೆ ಹೋದ ಬಳಿಕ ಬೇರೆ ಬೇರೆ ರಾಜ್ಯಗಳಿಂದ ಬಂದ ಸಹೋದ್ಯೋಗಿಗಳೊಂದಿಗೆ ಮೂರು ದಿನ
ಕಳೆಯುವಷ್ಟರಲ್ಲಿ ಕೊರೋನದ ಬಗ್ಗೆ ಸ್ವಲ್ಪಮಟ್ಟಿಗೆ ಭಯ ಹುಟ್ಟಿಕೊಂಡಿತ್ತು. ಆದರೆ ಭಾರತದಲ್ಲಿ
ಕೊರೋನ ಹೆಚ್ಚು ಅನಾಹುತ ಮಾಡಲಾರದು ಎಂಬ ನಂಬಿಕೆಯೇ ಬಲವಾಗಿತ್ತು. ಲಾಕ್ ಡೌನ್ ಮಾಡುವಂತಹ ಗಂಭೀರ
ಪರಿಸ್ಠಿತಿ ಬರಬಹುದೆಂದು ಕನಸಿನಲ್ಲೂ ಊಹಿಸಿರಲಿಲ್ಲ.
೧೮/೩/೨೦೨೦ ನೇ ದಿನಾಂಕದಂದು ನಾನು, ದೇವದತ್ತ ಸರೋದೆ, ಹಾಗೂ ಪದ್ಮಮಿತ್ರ ಶ್ರೀನಿವಾಸ ಮೂವರೂ ಬೆಳಿಗ್ಗೆ ಹೋಟೇಲ್ ನಿಂದ ಒಟ್ಟಾಗಿ ಏರ್ ಪೋರ್ಟ್
ಗೆ ಟ್ಯಾಕ್ಸಿಯಲ್ಲಿ ಹೋಗಿ ಭುವನೆಶ್ವರಕ್ಕೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ ಕುಳಿತೆವು. ಆರಂಭದ
ದಿನಗಳಲ್ಲಿ ಅಂದರೆ ೨೦೦೯ ರ ಸಮಯದಲ್ಲಿ ವಿಂಡೊ ಸೀಟ್ ಕೇಳಿ ತೆಗೆದುಕೊಳ್ಳುತ್ತಿದ್ದೆ. ನನಗೆ
ವಿಮಾನ ಪ್ರಯಾಣ ಮಾಡಿ ಮಾಡಿ ಬೋರು ಹೊಡೆಸಿತ್ತು.ಹಾಗಾಗಿ ನಾನು ಮಧ್ಯದ ಸೀಟಿನಲ್ಲಿ ಕುಳಿತಿದ್ದೆ.
ನನ್ನ ಒಂದು ಬದಿ ಸರೋದೆ ಹಾಗೂ ಇನ್ನೊಂದು ಬದಿಯಲ್ಲಿ ಶ್ರೀನಿವಾಸ ಕುಳಿತಿದ್ದರು. ಇದರಿಂದಲೂ ನಾನು
ಸುರಕ್ಷಾಭಾವನೆಯನ್ನು ಹೊಂದಿದ್ದೆ. ಆಗಿನ್ನೂ ಪಿ.ಪಿ.ಇ. ಕಿಟ್ ಪ್ರಯಾಣಿಕರಿಗೆ ಕೊಡುವ ಪದ್ಧತಿ
ಬಂದಿರಲಿಲ್ಲ. ಆವತ್ತು ಪ್ರಯಾಣದ ದಿನವಾದ್ದರಿಂದ ಮಧ್ಯಾಹ್ನ ೨.೩೦ಕ್ಕೆ ಪುರಿಗೆ ತಲುಪಿದ್ದರೂ
ಕಾಲೇಜಿಗೆ ಹೋಗಲಿಲ್ಲ. ಸ್ನಾನ ಅಡಿಗೆ ಊಟ ಎಲ್ಲ ಮಾಡಿಮುಗಿಸಿದಾಗ ೪.೩೦ ಆಗಿತ್ತು. ಹಾಗಾಗಿ ಮತ್ತೆ
ಹೋಗುವ ಮನಸ್ಸಾಗಲಿಲ್ಲ. ಸಮುದ್ರದ ಬದಿಗೆ ಹೋಗಿ ಪಾರ್ಕ್ ನಲ್ಲಿ ೨ ಸುತ್ತು ಬಂದು ಮನೆಯವಳಿಗೆ
ಫೋನ್ ಮಾಡಿ ಎಲ್ಲಾ ವಿವರಣೆ ನೀಡಿದೆ.
ಎಪ್ರಿಲ್ ಮೊದಲೆರಡು ವಾರಗಳಲ್ಲಿ ಸುಮಾರು ರಜೆಗಳಿದ್ದವು. ಎರಡು ಆರ್.ಹೆಚ್. ಮತ್ತು ೫
ಸಿ.ಎಲ್ ಬಳಸಿದರೆ ಸುಮಾರು ೧೨ ದಿನಗಳ ದಿನಗಳ ದೀರ್ಘ ರಜೆ ಪಡೆಯಬಹುದಾದ ಅವಕಾಶವಿದೆಯೆಂದು ಹಿಮಾಚಲ
ಪ್ರದೇಶದ ಬಲಾಹಾರ್ ನಲ್ಲಿದ್ದ ಮಿತ್ರ ಪ್ರೊ.ಸೋಮನಾಥ ಸಾಹು ರವರು ಮೊದಲೇ ತಿಳಿಸಿದ್ದರು. ಅವರು
ದೆಹಲಿಯಲ್ಲೂ ಸಹ ಸಿಕ್ಕಿದ್ದರು. ಹಾಗಾಗಿ ನಾನು ಮಾರ್ಚ್ ೨೭ ನೇ ತಾರೀಕಿಗೆ ಬೆಂಗಳೂರಿಗೆ ಹೊರಡಲು
ಗರೀಬರಥ್ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದ್ದೆ. ಹಾಗಾಗಿ ಇನ್ನೂ ಒಂಭತ್ತು ದಿನಗಳಲ್ಲಿ ನಾನು
ಶೃಂಗೇರಿಗೆ ಹೊರಟು ಬರುವವನಿದ್ದೇನೆ ಎಂಬುದು ಅಖಿಲಾಳಿಗೂ ಗೊತ್ತಿತ್ತು. ನಾವು ಫೊನಿನಲ್ಲಿ
ಸರಾಸರಿ ಅರ್ಧ ಗಂಟೆ ಮಾತಾಡುತ್ತಿದ್ದೆವು. ಇವತ್ತು ದೆಹಲಿಯಿಂದ ವಾಪಸ್ ಬಂದಿದ್ದರಿಂದ
ಸುಮಾರು ಒಂದು ಗಂಟೆ ಅವಳ ಜೊತೆ ಮಾತಾಡಿದೆ.
ದೆಹಲಿಯಲ್ಲಿದ್ದಾಗ ಅಲ್ಲಿ ಯಾಕೊ ಗೊತ್ತಿಲ್ಲ ನೆಟ್ವರ್ಕ್ ಸಮಸ್ಯೆ ಬಹಳ ಇತ್ತು. ಹಾಗಾಗಿ ಅಲ್ಲಿ ಹೆಚ್ಚು ಫೋನ್ ನಲ್ಲಿ
ಮಾತಾಡುತ್ತಿರಲಿಲ್ಲ. ಕೇವಲ ಕ್ಷೇಮ ಸಮಾಚಾರ ಮಾತ್ರ ಆಗಿತ್ತು.
ಆಮೇಲೆ ಒಂದು ಚಹಾ ಕುಡಿದು ಮನಗೆ ಹೋದೆ.
ಕೊರೋನದ ಆಗಮನ
೨೦/೩/೨೦೨೦ ಎಂದಿನಂತೆ ಪೂರ್ವಾಹ್ನದ ತರಗತಿಗಳನ್ನು ಮುಗಿಸಿ ಊಟ
ಮುಗಿಸಿ ಮತ್ತೆ ಕಾಲೇಜ್ ಕ್ಯಾಂಪಸ್ ಗೆ ಬಂದೆ. ಸುಮಾರು ೨.೧೫ ಆಗಿರಬಹುದು. ನಾನು ಶಿಕ್ಷಾವಿಭಾಗದ ಮೂರನೇ ಮಹಡಿಯ ನನ್ನ ರೂಮಿಗೆ ಬಂದಾಗ
ಪಕ್ಕದ ರೂಮಿನಲ್ಲಿದ್ದ ಡಾ.ಸೂರ್ಯಪ್ರಸಾದ್ ಹೇಳಿದರು – “ಮಾರ್ಚ್ ೩೦ ರ ತನಕ ಕೊರೋನ
ನಿಯಂತ್ರಣಕ್ಕಾಗಿ ಕಾಲೇಜ್ ಬಂದ್ ಮಾಡುವ ಆದೇಶ ನಮ್ಮ ಪ್ರಿನ್ಸಿಪಾಲರು ಹೊರಡಿಸಿದ್ದಾರೆ
....” ಆವತ್ತು ಶುಕ್ರವಾರ ಆಗಿದ್ದರಿಂದ ನಾನು
ಕೂಡಲೇ ಅಂದುಕೊಂಡೆ – ಹತ್ತು ದಿನ ಕಾಲೇಜ್ ಬಂದ್ ಆದರೆ ನಾನು ಇಲ್ಲಿ ಇದ್ದಾದರೂ ಏನು ಮಾಡುವುದು
? ೩.೧೫ ಕ್ಕೆ ಗರೀಬ್ ರಥ್ ಇದೆ. ಆದರೆ ನನ್ನ
ಟಿಕೆಟ್ ಇರುವುದು ೨೭ನೇ ತಾರೀಕಿಗೆ. ಆದ್ದರಿಂದ ನಾನು ತತ್ ಕ್ಷಣ IRCTC ಯಲ್ಲಿ ಸೀಟ್ ದೊರಕುವುದೇ ಎಂದು ಸರ್ಚ್
ಮಾಡಿದೆ. ಆಶ್ಚರ್ಯ !!! ನೂರಾರು ಸೀಟುಗಳು ಅದರಲ್ಲಿ ಖಾಲಿಯಿದ್ದವು. ಆದರೆ ಆದೇಶಪ್ರತಿಯನ್ನು
ನೋಡದೆಯೇ ಹೇಗೆ ಹೋಗುವುದು ಎಂದು ಒಮ್ಮೆ
ಚಿಂತಿಸಿದೆ. ಆಗ ಸೂರ್ಯಪ್ರಸಾದ್ ಹೇಳಿದರು – “ನಮ್ಮ HOD ನೋಡಿದ್ದಾರಂತೆ. ಅವರೇ ನನಗೆ ಹೇಳಿದ್ದು. ನಾನು ಮೊನ್ನೆ
ಸೋಮವಾರ ಅಷ್ಟೇ ಊರಿಂದ ಬಂದಿರುವುದರಿಂದ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನೀವು
ಅವರನ್ನೇ ಕೇಳಿ ”
ನಾನು ಕೂಡಲೇ ಅಕಾಡೆಮಿಕ್ ಬಿಲ್ಡಿಂಗ್ ನಲ್ಲಿರುವ ಆಫೀಸ್ ನ ಕಡೆಗೆ
ಹೊರಟೆ. ದಾರಿ ಮಧ್ಯದಲ್ಲಿ HOD ಸಿಕ್ಕಿದರು. ಆದರೆ ಅವರು ಹೇಳಿದರು – ರಜೆ ಕೊಡಬೇಕೆಂಬ
ಆದೇಶ ದೆಹಲಿಯಿಂದ ಬಂದಿದೆ. ಪ್ರಿನ್ಸಿಪಾಲರು ಅದರ ಮೇಲೆ ಒಂದು ನೋಟ್ ಬರೆದು ಆಫೀಸಿಗೆ ಕೊಟ್ಟಿದ್ದಾರೆ. ಕಾಲೇಜ್ ಕ್ಯಾಂಪಸ್ ನಿಂದ
ಇನ್ನೂ ಆದೇಶಪತ್ರ ಹೊರಡಿಸಿಲ್ಲ. ಆದರೆ ಪ್ರಿನ್ಸಿಪಾಲರು ನನ್ನ ಬಳಿಯಲ್ಲಿ ಎಲ್ಲ ಹೇಳಿದ್ದಾರೆ.
ರಜೆ ಅಂತ ಘೋಷಣೆ ಮಾಡಿದರೂ ಯಾರೂ ಅವರವರ ಊರಿಗೆ ಹೋಗುವಂತಿಲ್ಲ ಅಂತನೂ ಹೇಳಿದ್ದಾರೆ. ಮಧ್ಯದಲ್ಲಿ ಯಾವಗಲಾದರೂ
ಕರೆದಾಗ ಬರಬೇಕಾಗುವುದು”
ನಾನು ಹೇಳಿದೆ – ಊರಿಗೆ ಹೋಗಬಹುದೆಂದುಕೊಂಡಿದ್ದೆ. ಇಲ್ಲಿ ಹತ್ತು ದಿನ
ರಜೆಯಲ್ಲಿ ಇದ್ದಾದರೂ ಏನು ಮಾಡುವುದು ?
ಅವರು ಹೇಳಿದರು – “ಪ್ರಿನ್ಸಿಪಾಲರು ಯಾವಾಗಲಾದರೂ ನಮ್ಮ
ವಿಭಾಗದವರನ್ನು ಕರೆದರೆ ನಾನು ಹೇಗಾದರೂ ಮ್ಯಾನೇಜ್ ಮಾಡುತ್ತೇನೆ. ಆದರೆ ನೀವು ಒಂದು ಬಾರಿ
ಪ್ರಿನ್ಸಿಪಾಲರಿಗೆ ಹೇಳಿ ಹೋಗುವುದು ಒಳ್ಳೆಯದು”
ನಾನು ಹೇಳಿದೆ – ನಾನು ಒಂದು ಬಾರಿ ಆದೇಶದ ಪ್ರತಿಯನ್ನು ನೋಡಬೇಕು.
ಆಫೀಸಿಗೆ ಹೋಗೋಣ”
ಆಫೀಸಿಗೆ ಹೋಗಿ ಸೆಕ್ಶನ್ ಆಫೀಸರ್ (ಎಸ್.ಒ.) ಬಳಿ ಮಾತಾಡಲು ಹೋದಾಗ
ಎಸ್.ಒ. ಅಲ್ಲಿರಲಿಲ್ಲ. ಊಟಕ್ಕೆಂದು ಹೋದವರು ಬಂದಿರಲಿಲ್ಲ. ಪ್ರಿನ್ಸಿಪಾಲರೂ ಕೂಡ ಬಂದಿರಲಿಲ್ಲ.
ಅಲ್ಲಿಯ ಕ್ಲರ್ಕ್ ಗಳ ಬಳಿ ಕೇಳಿದಾಗ ಅಲ್ಲೇ ಎಸ್.ಒ. ಟೇಬಲ್ ಮೇಲೆ ಇದೆ ಅಂದರು. ಆ ಪತ್ರ
(ದೆಹಲಿಯಿಂದ ಬಂದದ್ದು)ನೋಡಿದಾಗ Confusion ಹೆಚ್ಚಾಯಿತು. ಆದರೆ ಅದರ ಮೇಲೆ ಒಂದು ಕಡೆ
ಪ್ರಿನ್ಸಿಪಾಲರು ಬರೆದಿದ್ದ ನೋಟ್ ಸಿಕ್ಕಿತು. ಆದರೂ ಇವರು ಇನ್ನೂ ಆದೇಶಪತ್ರ ಟೈಪ್ ಮಾಡಿ
ಪ್ರಿನ್ಸಿಪಾಲರ ಸೈನ್ ಮಾಡದೆ ಇರುವುದರಿಂದ ನನ್ನ ಮನಸ್ಸಿಗೆ Confirmation ಆಗಲಿಲ್ಲ. ಹಾಗಾಗಿ ಫೋನ್ ಮಾಡುವುದೇ ಸೂಕ್ತ ಎಂದು
ತಿಳಿದು ಪ್ರಿನ್ಸಿಪಾಲರಿಗೆ ಫೋನ್ ಮಾಡಿದೆ. ರಜೆಯ
ವಿಷಯದಲ್ಲಿ ಸ್ಪಷ್ಟತೆ ಇದ್ದರೂ ಊರಿಗೆ ಹೋಗಲು ಅನುಮತಿಯಿಲ್ಲ ಎಂಬುದಾಗಿ ವೈಸ್
ಛಾನ್ಸಲರೇ(ವಿ.ಸಿ.) ಹೇಳಿದ್ದಾರೆ ಅಂತ ಅವರು
ಅಂದರು. ನನಗೆ ಆಗ ಬಹಳ ನಿರಾಸೆಯಾಯಿತು.
ಮನೆಯಿಂದ ೧೮೦೦ ಕಿ.ಮೀ. ದೂರದಲ್ಲಿ ಕುಟುಂಬದಿಂದ ದೂರವಿರುವಾಗ ರಜೆ
ಸಿಕ್ಕಿಯೂ ಮನೆಗೆ ಹೋಗಲಿಕ್ಕಾಗದ ಪರಿಸ್ಥಿತಿ ಇದ್ದರೆ ಆಗುವ ಚಡಪಡಿಕೆ ಇದೆಯಲ್ಲ ಅದನ್ನು
ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆ.
ಅದರಲ್ಲೂ ಒಂದೂವರೆ ವರ್ಷದ ಮಗು, ಹೆಣ್ಣು ಮಗಳು, ಗೋಮಾತೆಯರು ಪ್ರೀತಿಯ ಮಡದಿ, ಶಾಂತ
ಪರಿಸರದಲ್ಲಿರುವ ಸ್ವಂತ ಮನೆ, ೩ ಎಕರೆ ಕೃಷಿಭೂಮಿಯಲ್ಲಿರುವ ಮಕ್ಕಳಂತಿರುವ ಎಳೆ ಅಡಕೆ ಇತ್ಯಾದಿ ಗಿಡಗಳು, ..... ಇವನ್ನೆಲ್ಲ ಬಿಟ್ಟು ಕೆಲಸವಿಲ್ಲದೆ ಕಾಲ
ಕಳೆಯುವುದು ಬಹಳ ಕಷ್ಟ. ಕಾಲೇಜ್ ನಡೆಯುತ್ತಿದ್ದರೆ ಯಾವುದೇ ಚಿಂತೆ ಅಷ್ಟಾಗಿ ಬಾಧಿಸುವುದಿಲ್ಲ.
ಹಗಲು ಕಾಲೇಜಿನಲ್ಲಿ ಪಾಠಪ್ರವಚನ, ಬಳಿಕ
ಮನೆಯಲ್ಲಿ ಅಧ್ಯಾಪನಕ್ಕಾಗಿ ಪೂರ್ವಸಿದ್ಧತೆ... ಹೀಗೆ ಕಾಲ ಕಳೆಯುತ್ತದೆ. ಆದರೆ ಕೆಲಸವಿಲ್ಲದೆ
ಎಲ್ಲರನ್ನೂ ಬಿಟ್ಟು ರಜೆ ಕಳೆಯುವ ಕಷ್ಟ ಯಾರಿಗೆ ಪ್ರಿಯವಾಗಬೇಕು ?
ಆಗ ಒಮ್ಮೆ ಹೀಗೆ ಅನಿಸಿತು – ಸೇನೆಯಲ್ಲಿ ಅದರಲ್ಲೂ ಗಡಿಯಲ್ಲಿ
ದೇಶರಕ್ಷಣೆಯ ಹೊಣೆ ಹೊತ್ತ ಸೈನಿಕನ ಪಾಡು ಹೇಗಿರಬಹುದು ? ಆತನ ಪ್ರಾಣ ಯಾವ ಕ್ಷಣದಲ್ಲೂ
ಹೋಗಬಹುದು. ಆತನ ಹೆಂಡತಿ ಊರ ಮನೆಯಲ್ಲಿ
ಕಾಯುತ್ತಿರುತ್ತಾಳೆ ಹೊಟ್ಟೆಯಲ್ಲಿ ಮೂರು ತಿಂಗಳ ಮಗುವನ್ನು ಹೊತ್ತುಕೊಂಡು. ೫ ತಿಂಗಳು
ಕಳೆಯುತ್ತಿದ್ದಂತೆ ಹೊಟ್ಟೆಯಲ್ಲಿದ್ದ ಮಗು ಮೆತ್ತಗೆ ಒದೆಯುವುದನ್ನು ಗಂಡ ಕೈಯಾಡಿಸಿ ಕಿವಿಯಾನಿಸಿ
ಅನುಭವಿಸಬೇಕು ಅಂದುಕೊಳ್ಳುತ್ತಾಳೆ. ಅದರ ಜೊತೆ ಆತ ಮಾತಾಡಬೇಕು ಅಂದುಕೊಳ್ಳುತ್ತಾಳೆ. ಡಾಕ್ಟರ್
ಬಳಿ ತಿಂಗಳ ಪರೀಕ್ಷೆಗೆ ಹೋಗುವಾಗ ಜೊತೆಗೆ ಗಂಡನಿರಬೇಕು ಅಂದುಕೊಳ್ಳುತ್ತಾಳೆ. ಕೊನೆಗೆ ಹುಟ್ಟಿದಾಗಲಾದರೂ ಆತ ಬಂದು ಮಗುವಿಗೆ ಮುತ್ತಿಕ್ಕಿದಾಗ
ಅಮ್ಮನಂತೆಯೇ ಮಗು ಇದೆ ಎಂದು ಹೇಳಿದಾಗ, ಇಲ್ಲ ಇಲ್ಲ
ಅಪ್ಪನಂತೆಯೇ ಇದೆ, ಹೊಟ್ಟೆಯಲ್ಲಿದ್ದಾಗ ಹೇಗೆ ಒದೆಯುತ್ತಿತ್ತು ಎಂದು ನನಗೆ
ಗೊತ್ತಿಲ್ಲವೇ ? ಎಂದು ಹೇಳಬೇಕು, ಹಾಗೆ ಹೇಳಿ ಮನಸಿನ ಭಾರವನ್ನು ಇಳಿಸಿಕೊಳ್ಳಬೇಕು ಎಂದು ಚಡಪಡಿಸುತ್ತಾಳೆ. ಯಾರಾದರೂ
ಸಂಬಂಧಿಕರು ಪರಿಚಿತರು ಮಗುವನ್ನು ನೋಡಲು ಬಂದವರು – ಮಗು ಯಾರ ಹಾಗಿದೆ ? ಎಂದು ಕೇಳಿದರೆ
ತಡಮಾಡದೆ ಅವನ ಅಪ್ಪನಂತೆಯೇ ಇದೆ ಎಂದು ಹೇಳುವುದರಲ್ಲೇ ಎಷ್ಟು ಸಮಾಧಾನಪಟ್ಟುಕೊಳ್ಳುತ್ತಾಳೆ.
ನನಗೆ ಅಥವಾ ಅಖಿಲಾಳಿಗೆ ಇಂಥ ಪರಿಸ್ಥಿತಿ ಉಂಟೇ ? ಎಂದು ಹಲವು ಬಾರಿ
ಯೋಚಿಸಿದ್ದುಂಟು.
ಆದರೆ ಅವರವರ ಕಷ್ಟ ಅವರವರಿಗೆ. ಸಮಾಧಾನಪಟ್ಟುಕೊಳ್ಳಲು ಸೈನಿಕರ ಮತ್ತು
ಅವರ ಕುಟುಂಬದವರ ಕಥೆ ಮನಸ್ಸನ್ನು ಸ್ವಲ್ಪಮಟ್ಟಿಗೆ ಹಗುರಗೊಳಿಸುವುದು ಸುಳ್ಳಲ್ಲ. ಆದರೆ ನಮ್ಮ
ಚಡಪಡಿಕೆಯ ಪರಿಸ್ಥಿತಿ ನಮ್ಮದೇ. ಅದನ್ನು ಬೇರೆ ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ಶನಿವಾರ ಅಂದರೆ ೨೧/೩/೨೦ ರಂದು ಮೋದಿಜೀ ದೇಶವನ್ನುದ್ದೇಶಿಸಿ
ಮಾತನಾಡುವವರಿದ್ದರು. ನಾನು ಅದಕ್ಕಾಗಿ ಕಾದು ಕುಳಿತಿದ್ದೆ. ಭಾನುವಾರ ಜನತಾ ಕರ್ಫ್ಯೂ
ಮಾಡಬೇಕೆಂದು ಅವರು ಕರೆ ಕೊಟ್ಟಿದ್ದರು. ದಿನ ಪೂರ್ತಿ ಯಾವುದೇ ಸಂಚಾರ ಸಾಧನಗಳಿರುವುದಿಲ್ಲ. ರೈಲು
ಬಸ್ ಇನ್ನಾವುದೇ ಸೇವೆಗಳು(ಮೆಡಿಕಲ್ ಇತ್ಯಾದಿ ಅನಿವಾರ್ಯ ಸೇವೆಗಳನ್ನು ಹೊರತುಪಡಿಸಿ)
ಇರುವುದಿಲ್ಲ ಎಂದು ಮೊದಲೇ ಸೂಚಿಸಲಾಗಿತ್ತು. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಸಂಜೆ
ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಗಂಟೆ ಅಥವಾ ಯಾವುದೇ ಪಾತ್ರೆಯನ್ನು ಬಡಿದು ಒಂದು ಮೂರು ನಿಮಿಷ
ಶಬ್ದ ಮಾಡಬೇಕು ಎಂದು ಮೋದೀಜಿ ವಿನಂತಿಸಿಕೊಂಡಿದ್ದರು. ಕೊರೋನವನ್ನು ಓಡಿಸಲು ನಾವೆಲ್ಲಾ ಒಟ್ಟಾಗಿ
ಕೈಜೋಡಿಸಿ ಶ್ರಮಿಸಬೇಕು ಎಂಬ ಭಾವನೆ
ನಮ್ಮೆಲ್ಲರಲ್ಲಿ ಜಾಗೃತವಾಗಲಿ ಎಂಬ ಆಶಯ ಅವರಿಗಿದ್ದಿರಬೇಕು ಎಂದೆನಿಸುತ್ತದೆ. ಹಾಗಾಗಿ ಈ
ಕಾರ್ಯಕ್ರಮ ದೆಶದೆಲ್ಲೆಡೆ ಹೇಗೆ ನಡೆಯಬಹುದು ಎಂಬ ಕುತೂಹಲ ನನಗೆ ಕೂಡ ಇತ್ತು. ಎಲ್ಲಕ್ಕಿಂತ
ಹೆಚ್ಚಾಗಿ ಜನರೆಲ್ಲ ಸ್ವಯಂ ಸ್ಫೂರ್ತಿಯಿಂದ ಮೋದಿಯವರ ಕರೆಗೆ ಪ್ರತಿಕ್ರೀಯಿಸುವ ತವಕದಲ್ಲಿದ್ದರು. ಹೀಗೆ ಒಂದು
ದಿನ ಜನತಾ ಕರ್ಫ್ಯೂ ಮಾಡಿದರೆ ಕೊರೋನ ಮಂಗಮಾಯವಾಗಿ ಬಿಡುತ್ತದೆ ಎಂದು ಎಲ್ಲರಿಗೂ ಒಂದು ರೀತಿಯ
ನಂಬಿಕೆ ಇತ್ತು. ಆವತ್ತು ಸರ್ಕಾರದ ಕಡೆಯಿಂದ
ಎಲ್ಲ ಸಾರ್ವಜನಿಕಸ್ಥಳಗಳಲ್ಲಿ ಸಾನಿಟೈಸ್ ಮಾಡುತ್ತಿರುವ ವೀಡಿಯೊಗಳು ಮಾಧ್ಯಮಗಳಲ್ಲಿ
ಬರುತ್ತಿದ್ದವು. ರೈಲಿನಲ್ಲಿ, ರೈಲ್ವೇ ಸ್ಟೇಶನ್ ಗಳಲ್ಲಿ, ವಿಮಾನಗಳಲ್ಲಿ, ವಿಮಾನ
ನಿಲ್ದಾಣಗಳಲ್ಲಿ, ಬಸ್ ಗಳಲ್ಲಿ ಬಸ್ ಸ್ಟಾಂಡ್ ಗಳಲ್ಲಿ ಎಲ್ಲೆಂದರಲ್ಲಿ ಸಾನಿಟೈಸೇಶನ್
ನಡೆಯುತ್ತಿತ್ತು.
ಅದನ್ನೆಲ್ಲ ನೋಡಿ ಆಗ ನನಗೆ ಅನಿಸಿತ್ತು
“ಹೀಗೆ ಮಾಡುವುದರಿಂದ
ನಿಜವಾಗಿಯೂ ಕೊರೋನ ಪೂರ್ತಿ ಸತ್ತು ಹೋಗುತ್ತದೆ. ಮತ್ತೆ ನಾಳೆಯಿಂದ ಪರಿಸ್ಥಿತಿ
ಮೊದಲಿನಂತಾಗುತ್ತದೆ”
ಮೋದಿಜೀ ಸಾರ್ವಜನಿಕರನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ
ಜನರಿಗೆ ಧೈರ್ಯವನ್ನು ತುಂಬಿ, ಜಾಗರೂಕರಾಗಿರುವಂತೆ ಮಾಡುವ ಇರಾದೆಯನ್ನು ಹೊಂದಿದ್ದರು. ನಮ್ಮ
ದೇಶದಲ್ಲಿ ವಾಸ್ತವವನ್ನು ನೇರವಾಗಿ ಹೇಳಿದರೆ ಜನ ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಅದರಲ್ಲೂ
ಕಾಂಗ್ರೆಸ್ ಮುಂತಾದ ಪಕ್ಷಗಳ ನಾಯಕರಂತೂ ಮೋದಿಜೀಯ ಒಂದೊಂದು ಮಾತನ್ನೂ ತಮಗೆ ಬೇಕಾದಂತೆ ತಿರುಚಿ
ಟೀಕೆ ಮಾಡುವ ಯಾವ ಅವಕಾಶವನ್ನೂ ಬಿಟ್ಟುಕೊಳ್ಳುವುದಿಲ್ಲ. “ಗಂಟೆ ಬಡಿದಾಕ್ಷಣ ಕೊರೋನ
ಓಡಿಹೋಗುವುದೇ ?” ಎಂಬ ಅಪಹಾಸ್ಯದ ಮಾತುಗಳನ್ನು
ಆಡದ ಕಾಂಗಿಗಳ ಅಥವಾ ಎಂಜಲು ಕಾಸು ತಿಂದವರ ಮುಖವೇ ಇಲ್ಲ ಎನ್ನಬಹುದು. ದೇಶದ ೧೩೦ ಕೋಟಿ ಜನರನ್ನು
ಒಂದು ಬಹುದೊಡ್ಡ ವಿಪತ್ತು ಎದುರಿಸಲು ಸಜ್ಜುಗೊಳಿಸುತ್ತಿರುವ ಶ್ರೇಷ್ಠ ಉಪಾಯಗಳಲ್ಲಿ ಇದು ಒಂದು
ಎಂದು ಯಾವನೇ ಒಬ್ಬ ವಿವೇಕಿಯಾದವನಿಗೆ ಸುಲಭವಾಗಿ ತಿಳಿಯುವಂತಿತ್ತು ಮೋದಿಯವರ ನಡೆ. ದೇಶಕ್ಕೆ
ಒದಗಿದ ಮಹಾ ವಿಪತ್ತನ್ನು ಮುಂಚಿತವಾಗಿಯೇ ಗಮನಿಸಿ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ತಣ್ಣಗೆ
ಮಾಡಿಸುತ್ತಾ ಈ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ದೇಶವನ್ನು ರಕ್ಷಿಸಲು ಅಣಿಗೊಳಿಸುತ್ತಿರುವ
ರೀತಿ ನೋಡಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಅವರು ಆ ಭಾಷಣದಲ್ಲಿ ಲಾಕ್ ಡೌನ್ ಮಾಡುವ ಕುರಿತು ಒಂದು ಸುಳಿವನ್ನು ಕೊಟ್ಟಿದ್ದರು. ಆದರೆ ನಮಗೆ
ಅದು ಅರಿವಿಗೆ ಬರಲೇ ಇಲ್ಲ. ಅದನ್ನು ಅವರು ಲಾಕ್ ಡೌನ್ ಘೊಷಣೆ ಮಾಡುವ ಸಮಯದಲ್ಲಿ ತಿಳಿಸಿದರು.
ಭಗವಂತ ಚೀನದಂತ
ರಾಕ್ಷಸನೆದುರು ಕೊರೋನದಂತಹ ಆ ರಾಕ್ಷಸನ ಶಸ್ತ್ರಗಳಿಂದ ದೇಶವನ್ನು ರಕ್ಷಿಸಲು ಮೋದಿಜೀಯನ್ನು
ಕಳುಹಿಸಿಕೊಟ್ಟಿದ್ದಾನೆ ಅಂತ ಅನಿಸುತ್ತದೆ.
ನಾನು ಶುಕ್ರವಾರ ಮನೆಗೆ ಹೊರಡಲಿಕ್ಕೆ ಆಗಲಿಲ್ಲ. ತುಂಬ ಚಿಂತೆ ಆದರೂ ಇನ್ನೇನು
ಒಂದು ವಾರ, ಅಲ್ಲಲ್ಲ ಹತ್ತು ದಿನ(ಯಾಕೆಂದರೆ ಒರಿಸ್ಸಾ ಸರ್ಕಾರ ಅದಾಗಲೇ ೧೦ ದಿನದ ಲಾಕ್ ಡೌನ್
ಘೋಷಿಸಿಯಾಗಿತ್ತು. ಆದರೆ ರೈಲು ಮತ್ತು ವಿಮಾನ ರಾಜ್ಯಸರ್ಕಾರದ ಅಧೀನದಲ್ಲಿ ಇಲ್ಲದೆ ಇದ್ದುದರಿಂದ
ಊರಿಗೆ ಹೋಗಲು ಯಾವುದೇ ತೊಂದರೆ ಇಲ್ಲ ಎಂದು ಭಾವಿಸಿದ್ದೆ. ಹಾಗೆಯೇ ಲಾಕ್ ಡೌನ್ ಇಷ್ಟು ದೊಡ್ಡ
ಮಟ್ಟದ ಮಾನಸಿಕ ಸಂಕ್ಷೋಭವನ್ನು ಉಂಟುಮಾಡಬಹುದು
ಎಂದು ನಾನು ಭಾವಿಸಿರಲಿಲ್ಲ.) ಕಳೆದರೆ ವಿಮಾನದಲ್ಲಿ ಹೊರಟು ಹೋಗಬಹುದು ಎಂದು ತಿಳಿದು ಟಿಕೆಟ್
ಬುಕ್ ಮಾಡಿದ್ದೆ. ಪ್ರೊ. ಸೋಮನಾಥ ಸಾಹುರವರು ತಿಳಿಸಿದ ಯೋಜನೆಯಂತೆ ಕೇವಲ ಸಿ.ಎಲ್ ಮತ್ತು
ಆರ್.ಹೆಚ್. ಮಾತ್ರ ಬಳಸಿ (ಈ.ಎಲ್. ಬಳಸದೆಯೇ) ರಜೆಯನ್ನು ಹೊಂದಿಸುವುದು ಕಷ್ಟ. ರಾಮನವಮಿಗೆ
ಕಬ್ಬಿನಾಲೆಗೆ ಕುಟುಂಬ ಸಮೇತನಾಗಿ ಹೋಗಬೇಕೆಂಬ ಆಸೆ ಈಡೇರುವುದಿಲ್ಲ. ಆದರೂ ಒಂದು ವಾರದ ಮಟ್ಟಿಗೆ ಮನೆಗೆ ಹೋಗಬಹುದು.”ಎಂದು ಯೋಚಿಸಿಕೊಂಡು ಸಮಾಧಾನಪಟ್ಟುಕೊಂಡೆ. ಹೇಗಿದ್ದರೂ ಜನತಾ
ಕರ್ಫ್ಯೂ ಮಾಡುವುದರಿಂದ ಕೊರೋನ ಸತ್ತು ಹೋಗುತ್ತದೆ. ಸ್ವಲ್ಪ ದಿನ ಅಂದರೆ ಹತ್ತು ದಿನ ಜಾಗರೂಕತೆ
ವಹಿಸಿದರೆ ಮತ್ತೆ ಯಾವುದೇ ಚಿಂತೆಯಿರುವುದಿಲ್ಲ ಎಂಬ ಭಾವನೆಯೇ ಮನಸಿನ್ನಲ್ಲಿ ತುಂಬಿತ್ತು. ಜನತಾ
ಕರ್ಫ್ಯೂ ವಂತೂ ಯಶಸ್ವಿಯಾಗಬೇಕು ಎಂಬ ಬಯಕೆ ಇತ್ತು. ಅದರಲ್ಲಿ ಹೇಗೆ ಜನ ಸ್ಪಂದಿಸುತ್ತಾರೆ ಎಂಬ
ಕುತೂಹಲವೂ ಇತ್ತು. ನಾವಂತೂ ಶ್ರದ್ಧೆಯಿಂದ ನಮ್ಮ ಪಾಲಿನ ಕರ್ತವ್ಯವನ್ನು ನಿಭಾಯಿಸಬೇಕು ಎಂಬ
ವಾಂಛೆಯಿತ್ತು. ಮೋದಿಜೀಯವರ ಕರೆಯಂತೆ ಒಂದು ದಿನ ಪೂರ್ತಿ ಮನೆಯಲ್ಲೇ ಇದ್ದು ಅವರು ತಿಳಿಸಿದಂತೆ
ನಡೆದುಕೊಳ್ಳಬೇಕು ಎಂಬ ನಿರ್ಣಯದ ಅಚಲತೆಯಿತ್ತು. “ನಿಮ್ಮಿಂದ ಸ್ವಲ್ಪ ಸಮಯವನ್ನು ಕೇಳಲು
ಬಂದಿದ್ದೇನೆ” ಎಂದು ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದಾಗ ಲಾಕ್ ಡೌನ್ ನಂತಹ ಭೀಕರ
ಪರಿಸ್ಥಿತಿ ಮುಂದೆ ಬರಲಿಕ್ಕೆ ಇದೆ ಎಂಬ ಒಂದು
ಸಣ್ಣ ಕಲ್ಪನೆಯೂ ಸಹ ಇರಲಿಲ್ಲ.
ಚೀನ ಯುರೋಪ್ ಮತ್ತು ಅಮೇರಿಕಾಗಳಲ್ಲಿ ಕೊರೋನದಿಂದ ಉಂಟಾದ
ಭೀಕರಪರಿಸ್ಥಿತಿಯ ವೀಡಿಯೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಅವರು ಕೊರೋನ
ಹರಡದಂತೆ ಲಾಕ್ ಡೌನ್ ಮಾಡಿದ್ದರು ಎಂಬ ಮಾಹಿತಿ ಆ ದಿನಗಳಲ್ಲಿ ಇರಲಿಲ್ಲ. ಚೀನದ ವುಹಾನ್ ನಲ್ಲಿ
ಕೊರೋನ ಹುಟ್ಟಿ ಅದಾಗಲೇ ಎಪ್ಪತ್ತು ಸಾವಿರದಷ್ಟು ಜನ ಸೋಂಕಿತರು ಅಲ್ಲಿ ಕಂಡುಬಂದಿದ್ದಾರೆ ಎಂಬ
ಮಾಹಿತಿ ಇತ್ತು. ಬಹಳಷ್ಟು ಸೋಂಕಿತರನ್ನು ಚೀನ ನಿರ್ದಯವಾಗಿ ಗೌಪ್ಯವಾಗಿ ಸಾಯಿಸುತ್ತಿತ್ತು ಎನ್ನುವುದಕ್ಕೆ
ಪುಷ್ಟಿ ಕೊಡುವಂತಹ ವೀಡಿಯೋಗಳು ಬರುತ್ತಿದ್ದವು. ವುಹಾನ್ ನ ಗಡಿಯಲ್ಲಿ ವಾಹನಗಳಲ್ಲಿ
ಬರುತ್ತಿರುವವರನ್ನು ಪರೀಕ್ಷಿಸಿ ಸೋಂಕಿತರೆಂದು ಗೊತ್ತಾದಾಗ ಅವರನ್ನು ಪ್ರಾಣಿಗಳಂತೆ ಬಂಧಿಸಿ
ಯಾವುದೋ ವಾಹನಗಳಿಗೆ ತುಂಬಿಸಿ ಪರೀಕ್ಷಿಸಿದ
ಸ್ಥಳವನ್ನೂ ಸಹ ಸ್ಯಾನಿಟೈಸ್ ಮಾಡುವ ವೀಡಿಯೋಗಳನ್ನು ನೋಡಿದಾಗ ಭಯವಾಗುತ್ತಿತ್ತು. ಚೀನದಲ್ಲಿ
ಸುಮಾರು ೨ ಕೋಟಿ ಜನರ ಮೊಬೈಲ್ ಸಂಖ್ಯೆ ಕಳದೊಂದು ತಿಂಗಳಿನಿಂದ ಡೆಡ್ ಆಗಿದೆ. ಪ್ರಾಯಶಃ ಡೆಡ್
ಆಗಿರುವುದು ಫೋನ್ ಮಾತ್ರ ಅಲ್ಲ. ಬದಲಾಗಿ ೨ ಕೋಟಿ ಕೊರೋನ ಸೋಂಕಿತರೂ ಚೀನದಲ್ಲಿ
ಸಾಯಿಸಲ್ಪಟ್ಟಿದ್ದಾರೆ ಎಂಬ ಊಹಾತ್ಮಕ ವರದಿಗಳಂತೂ ಕೊರೋನದ ಬಗ್ಗೆ ತುಂಬ
ಭಯವನ್ನುಂಟುಮಾಡುತ್ತಿದ್ದವು. ಎಕೆಂದರೆ ಚೀನದ ಕಮ್ಯುನಿಷ್ಟ್ ಸರ್ಕಾರಕ್ಕೆ ಅಂತಹ ಕೆಲಸ ಮಾಡಲು
ಯಾವುದೇ ಸಂಕೋಚವೂ ಇಲ್ಲ. ಅದಕ್ಕೆ ಹಾಗೆ ಜನರನ್ನು ಸಾಯಿಸುವ ಅಭ್ಯಾಸ ಕಮ್ಯುನಿಸಂ ಅಲ್ಲಿ
ಹೊಕ್ಕಿದಾಗಿನಿಂದ ಇದೆ. ಅವುಗಳಲ್ಲಿ ಕೆಲವು ಪ್ರಸಿದ್ದ ಉದಾಹರಣೆಗಳು ಜಗತ್ತಿಗೆಲ್ಲ
ತಿಳಿದಿರುವಂತೆ ಬೀಜಿಂಗ್ ನ ಟೈನನ್ ಮನ್
ವೃತ್ತದಲ್ಲಿ ಕಮ್ಯುನಿಷ್ಟ್ ಸರ್ಕಾರದ
ವಿರುದ್ದವಾಗಿ ಅಲ್ಲಿನ ಹತ್ತುಸಾವಿರಕ್ಕಿಂತಲೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಧರಣಿ ಕೂತಾಗ ಸೇನೆಯನ್ನು ಬಳಸಿ ಕೆಲವೇ
ನಿಮಿಷಗಳಲ್ಲಿ ಅವರೆಲ್ಲರನ್ನೂ ಸಾಯಿಸಿ ಸುದ್ದಿ ಎಲ್ಲೂ ತಿಳಿಯದಂತೆ ಮುಚ್ಚಿಟ್ಟಿದ್ದು.
ಹಾಗೆಯೇ ಟಿಬೆಟ್ ನಲ್ಲಿ ೬೦ ಲಕ್ಷದಷ್ಟಿದ್ದ ಶಾಂತಿಪ್ರಿಯ ಬೌದ್ಧರನ್ನು ೩೦ ಲಕ್ಷಕ್ಕೆ
ಇಳಿಸಿದ್ದು. ಅದಕ್ಕಾಗಿ ಎಲ್ಲ ರೀತಿಯ ಅಮಾನವೀಯ ನಡೆಗಳನ್ನೂ ಅನುಸರಿಸಿದ್ದು.
ಹೀಗೆ ಚೀನ ಜಗತ್ತಿನ ಕಣ್ಣಿಗೆ ಅದು ತನ್ನನ್ನು ತಾನು ತೋರಿಸುವಂತೆ
ವಸ್ತುತಃ ಅದು ಇದೆಯೆಂದು ಯಾರೂ ನಂಬುವುದಿಲ್ಲ.
ಅದು ಜಗತ್ತಿಗೆ ಇಂದಿಗೂ ಮುಕ್ತವಾಗಿ ತನ್ನನ್ನು ತಾನು ತೋರಿಸಿಕೊಳ್ಳುವುದೇ ಇಲ್ಲ. ಹಾಗಾಗಿ ಎಲ್ಲ
ಊಹಾಪೋಹಗಳೂ ಹೇಗೆ ಸತ್ಯವೆನ್ನಲಾಗುವುದಿಲ್ಲವೋ
ಹಾಗೆಯೇ ಅಸತ್ಯವೆನ್ನಲೂ ಆಗುವುದಿಲ್ಲ. ಇಂತಹ ನಯವಂಚಕ ಚೀನ ತನ್ನ ವಿಸ್ತರಣಾವಾದಿ ನೀತಿಯಂತೆ
ಜಗತ್ತನ್ನು ಕಮ್ಯುನಿಷ್ಟ್ ನ ಅಡಿಯಾಳಾಗಿಸಲು ಅನುಸರಿಸುತ್ತಿರುವ ಅಮಾನವೀಯ ನಡೆಗಳಲ್ಲಿ ಕೊರೋನ
ಕೂಡ ಒಂದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪುರುಸೊತ್ತಿಲ್ಲದ ಸ್ಥಿತಿಯಲ್ಲಿ ಕೊರೋನದ ಜೊತೆಗೆ
ಹೆಣಗಾಡುತ್ತಲೇ ಇವೆ ಜಗತ್ತಿನ ಇತರ ದೇಶಗಳು.
ಹೊರಡಲು ಇದ್ದ ಎರಡನೆಯ ಅವಕಾಶವನ್ನು ಬಿಟ್ಟಿದ್ದು
೨೦/೩/೨೦ ಶುಕ್ರವಾರ ನಾನು ಊರಿಗೆ ಹೊರಡಲಿಕ್ಕೆ ಆಗಲಿಲ್ಲ ಎಂಬುದನ್ನು
ಅಖಿಲ ಸರಿತಾ ಭಗಿನಿಯವರ ಜೊತೆ ಮಾತನಾಡುವಾಗ ಹೇಳಿದ್ದಳು. ಆಗ ಅವರು ಅವಳ ಹತ್ತಿರ ಹೇಳಿದ್ದು
ಎನೆಂದರೆ ಖರ್ಚಾದರೂ ಚಿಂತೆ ಮಾಡದೆ ಅವಕಾಶವಿದ್ದರೆ ವಿಮಾನದಲ್ಲಿ ಹೊರಡುವುದೇ ಸೂಕ್ತ ಅಂತ. ಆದರೆ
ಕುಲಪತಿಗಳು Strict ಆಗಿ ಹೇಳಿದ್ದಾರೆ ಯಾರೂ ಊರಿಗೆ
ಹೋಗುವಂತಿಲ್ಲ ಎಂಬ ವಿಷಯವನ್ನು ಪ್ರಿನ್ಸಿಪಾಲರು ಹೇಳಿದ್ದರಿಂದ ನಾನು ಹೊರಡುವ ಧೈರ್ಯ ಮಾಡಲಿಲ್ಲ.
ಹೇಗಿದ್ದರೂ ಹತ್ತು ದಿನಗಳ ಬಳಿಕ ಹೊರಡುವುದಿದೆ. ವಿಮಾನದ ಹಾಗೂ ರೈಲಿನ ಟಿಕೆಟ್ ಬುಕ್ ಮಾಡಿ
ಇಟ್ಟುಕೊಂಡಿದ್ದೇನೆ. ಕೆಲಸವಿಲ್ಲದೆ ಹತ್ತು ದಿನದ ರಜೆಯನ್ನು ಕಳೆಯುವುದು ಬಹಳ ಕಷ್ಟವಾದರೂ
ಗತ್ಯಂತರವಿಲ್ಲವೆಂದು ಮನಸ್ಸನ್ನು ಸಜ್ಜುಗೊಳಿಸಿಕೊಂಡಿದ್ದೆ ಏಪ್ರಿಲ್ ಒಂದನೇ ತಾರೀಕು ಯಾವಾಗ
ಬರುತ್ತದೆ ಎಂದು ಕಾಯುತ್ತಾ...
9. ಪರಿಸರದ ಬಾಗಿಲಿಗೆ ಬೀಗ, ಜನತಾ ಕರ್ಫ್ಯೂ, ಲಾಕ್ ಡೌನ್ ಫೆಸ್ I, II, III,
ಜನತಾ ಕರ್ಪ್ಯೂ ಮಾಡಬೇಕೆಂದು ಮೋದಿಜೀ ಕರೆಕೊಟ್ಟಂತೆ ದೇಶದಾದ್ಯಂತ ಜನ
ಭಾರೀ ಉತ್ಸಾಹದಿಂದ ಶ್ರದ್ಧೆಯಿಂದ ಜನತಾ ಕರ್ಪ್ಯೂವನ್ನು ಆಚರಿಸಿದರು. ನಾನು ಸಹ ಅದಕ್ಕೆ
ಹೊರತಾಗಿರಲಿಲ್ಲ. ಆದರೆ ಕೆಲವು ಕಡೆಯಿಂದ ವರದಿಗಳು ಬರುತ್ತಿದ್ದುದನ್ನು ನೋಡಿದರೆ ಆಶ್ಚರ್ಯ
ಆಗುತ್ತಿತ್ತು. ಎಷ್ಟೋ ಜನ ಬೀದಿಗಿಳಿದು ಸಾಲಾಗಿ ಗಂಟೆ ಬಾರಿಸುತ್ತಾ ಕೊರೋನವನ್ನು ಓಡಿಸುವ
ದೃಶ್ಯವನ್ನು ನೋಡಿ ನಗು ಬರುತ್ತಿತ್ತು. ಮೋದೀಜಿ ಹೇಳಿದ್ದು ಮನೆಯಲ್ಲೇ ಇದ್ದು ಬೇರೆಯವರ
ಸಂಪರ್ಕಕ್ಕೆ ಬರದೆ ಇದ್ದರೆ ಕೊರೋನದ ಹರಡುವಿಕೆಯ ಸರಪಳಿ ತುಂಡಾಗುತ್ತದೆ ಎಂಬುದಾಗಿ. ಆದರೆ ಜನ
ಅದೆಷ್ಟು ಭಾವುಕರು ನೋಡಿ.
ಬಳಿಕ ಮಂಗಳವಾರ ೨೪ ನೇ ತಾರೀಕಿನಂದು ಮೋದೀಜಿ ದೇಶವನ್ನುದ್ದೇಶಿಸಿ
ರಾತ್ರಿ ೮ ಗಂಟೆಗೆ ಮಾತನಾಡುತ್ತಾರೆ ಎಂದು ಸೋಮವಾರ ತಿಳಿಯಿತು. ಈ ಬಾರಿ ಇನ್ನೂ ಕೆಲವು ನಿರೀಕ್ಷೆಗಳಿದ್ದವು.
ವಿಶೇಷವಾಗಿ ಜನತಾ ಕರ್ಫ್ಯೂ ನಂತೆ ಇನ್ನೂ ಕೆಲವು ಸರಳ ಉಪಾಯಗಳು ಇರಬಹುದೆಂದು
ಭಾವಿಸಿದ್ದಾಗಿತ್ತು. ಆದರೆ ಮೋದೀಜಿ ರಾತ್ರಿ ಟಿ.ವಿ.ಯ ಪರದೆಯಲ್ಲಿ ಬಂದವರು ೨೧ ದಿನಗಳ ಸುದೀರ್ಘ
ಕಾಲದ ಲಾಕ್ಡೌನ್ ಘೋಷಿಸಿದರು. ಈ ಕ್ಷಣದಿಂದ ಸಂಪೂರ್ಣ ದೇಶ
ಲಾಕ್ಡೌನ್ಗೆ ಒಳಗಾಗಲಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ೨೧ ದಿನಗಳ ಕಾಲ ಕಳೆಯಬೇಕು.
ರಸ್ತೆಮಾರ್ಗ ರೈಲುಮಾರ್ಗ ವಿಮಾನಮಾರ್ಗ ಯಾವುದೇ ಆಗಲಿ ಕಾರ್ಯಾಚರಿಸುವುದಿಲ್ಲ. ಎಲ್ಲರಿಗೂ
ಆಹಾರವಸ್ತುಗಳ ಅಗತ್ಯವಸ್ತುಗಳ ಕೊರತೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂಬುದಾಗಿ
ಘೋಷಿಸಿದರು. ನಾನು ಎಪ್ರಿಲ್ ೧ನೇ ತಾರೀಖಿಗೆ ರಾಮನವಮಿ ಆಚರಿಸಲು ಕುಟುಂಬಸಮೇತನಾಗಿ ಊರಿಗೆ ಹೋಗುವ
ಆಸೆಯಿಟ್ಟುಕೊಂಡಿದ್ದೆ. ಅದಂತೂ ಆಗುವುದಿಲ್ಲ ಎಂದು ಮೋದಲೇ ಖಾತ್ರಿಯಾಗಿತ್ತು. ಪರವಾಗಿಲ್ಲ.
ಏಪ್ರಿಲ್ ೩ನೇ ತಾರೀಖಿಗೆ ತಲುಪಿ ಒಂದುವಾರ ಕುಟುಂಬದೊಂದಿಗೆ ಈ.ಎಲ್. ಕರ್ಚು ಮಾಡಿಯಾದರೂ ಇರೋಣ
ಎಂದಿದ್ದ ನನಗೆ ಶಾಕ್ ಕಾದಿತ್ತು. ಕೂಡಲೇ ಏಪ್ರಿಲ್ ೧೫ನೇ ತಾರೀಖಿಗೆ ವಿಮಾನಕ್ಕೆ ಟಿಕೆಟ್ ಬುಕ್
ಮಾಡಿದೆ. ನನ್ನ ಅಕೌಂಟ್ನಲ್ಲಿ ಹಣ ಕಡಿಮೆಯಿದ್ದರೂ
ವಿಮಾನಕ್ಕಾಗುವಷ್ಟು ಇತ್ತು. ಜೊತೆಗೆ ಕೂಡಲೇ ಮಾಡದಿದ್ದರೆ ವಿಮಾನದ ಟಿಕೆಟ್ ಬಹುಬೇಗ
ದುಬಾರಿಯಾಗಬಹುದು ಎಂದು ಯೋಚಿಸಿ ಇಂಡಿಗೋ ವಿಮಾನದಲ್ಲಿ ಬುಕ್ ಮಾಡಿದೆ. ಆದರೆ ಭುವನೇಶ್ವರದಿಂದ
ಬೆಂಗಳೂರಿಗೆ ಇದ್ದ ಇಂಡಿಗೋ ರದ್ದಾಗಿತ್ತು.
ಹಾಗಾಗಿ ಏಪ್ರಿಲ್ ೧೫ರಂದು ಪ್ರಯಾಣಿಸಲು ಮಾರ್ಚ್ ೨೪ ರಂದು ರಾತ್ರಿಯೇ ಮೊಬೈಲ್ನಲ್ಲಿ ಚೆನ್ನೈಗೆ
ಟಿಕೆಟ್ ಮಾಡಿದೆ.
ಮನಸ್ಸು ಬಹಳ
ಭಾರವಾಗಿತ್ತು. ಉದ್ವೇಗ ಅತಿಯಾಗಿತ್ತು. ಆದರೆ
ಜಗತ್ತೆಲ್ಲ ಅದೆಷ್ಟು ಥರಗುಟ್ಟಿತ್ತು ಎಂದರೆ ನನಗಿರುವ ಆತಂಕ, ಭಯ, ಕಷ್ಟ, ದುಃಖ, ದುಮ್ಮಾನ ಎಲ್ಲವೂ ನಗಣ್ಯ. ನನಗೆ
ವಸ್ತುತಃ ಹೆಚ್ಚು ಮನಸ್ಸಿಗೆ
ಕಷ್ಟವಾಗುತ್ತಿದ್ದುದು ಏನೆಂದರೆ ಸಣ್ಣ ಮಗು ಮಗಳು, ನಾಲ್ಕು ಗೋಮಾತೆಯರು, ಸ್ವಾಮಿಭಕ್ತಿಯ ಎರಡು
ಶ್ವ್ವಾನಗಳು ..... ಇವುಗಳನ್ನೆಲ್ಲ ಪ್ರೀತಿಯಿಂದ ಒಬ್ಬಳೇ ನೋಡಿಕೊಳ್ಳಬೆಕಾದ ಪರಿಸ್ಥಿತಿ ಇದ್ದರೂ
ನನ್ನನ್ನು ಪುರಿಗೆ ಸಂತೋಷದಿಂದ ಕಳುಹಿಸಿಕೊಟ್ಟ ಮಡದಿಗೆ ಏನೂ ಸಹಾಯ ಮಾಡಲಾಗದ ಸ್ಥಿತಿಯಲ್ಲಿ
ಸಿಕ್ಕಿಕೊಂಡಿರುವುದು ಪುರುಷನಾದ ನನಗೆ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ನನ್ನ ಕುಟುಂಬವೇ ನನ್ನಿಂದ
ಏನನ್ನೂ ನಿರೀಕ್ಷಿಸಲಾರದ ಸ್ಥಿತಿ ನನಗೆ ಇದೆ ಎನ್ನುವುದೇ ಹೆಚ್ಚು ವೇದನೆಯನ್ನುಂಟು
ಮಾಡುತ್ತಿತ್ತು. ಎಕೆಂದರೆ ಲಾಕ್ ಡೌನ್ ಆಗಿದ್ದರಿಂದ ಆ ದಿನಗಳಲ್ಲಿ ಯಾರೂ ಯಾರ ಮನೆಗೂ ಹೋಗಲು, ದೂರದಿಂದ ಮಾತನಾಡಲೂ ಭಯಪಡುವ
ಪರಿಸ್ಥಿತಿ. ಹಾಗಾಗಿ ಹೆಚ್ಚಿನ ಮನೆಗಳಂತೆ ನಮ್ಮ ಮನೆಯ ಗೇಟಿಗೆ ಕೂಡ ಬೀಗ ಬಿದ್ದಿತ್ತು. ತರಕಾರಿ
ದಿನಸಿ ಔಷಧಿ ಎಲ್ಲ ಎಲ್ಲಿಂದ ಬರಬೇಕು ? ಮನುಷ್ಯನಾದವ ಇನ್ನೊಬ್ಬ ಮನುಷ್ಯನನ್ನು ನಂಬಲಾಗದಂತಹ
ಸ್ಥಿತಿ !!!. ಬೇರೆಯವರ ಸಹಾಯ ಕೇಳುವುದೆಂದರೆ
ಮನೆಯವಳಿಗೆ ನನ್ನಂತೆಯೇ ಬಹಳ ಸಂಕೋಚ. ಹಾಗಾಗಿ ಪಕ್ಕದಲ್ಲೇ ತುಂಬ ಸಹೃದಯರಾದ ಗುರುರಾಜ
ಭಟ್ಟರಿದ್ದರೂ ಸಂಕೋಚ, ಹಾಗೇಯೇ ಕೊರೋನದ ಭಯ ಎರಡೂ ಸೇರಿ
ಮನೆಯಲ್ಲೇ ಕಟ್ಟಿ ಹಾಕಿದಂತಾಗಿತ್ತು ಅಖಿಲಾಳಿಗೆ.
ನಾನು ತಿಂಗಳಿಗೊಂದು ಸಲ ಬಂದಾಗ ಬೇಕಾದ ಎಲ್ಲ ದಿನಸಿ ಸಾಮಾನುಗಳ ಪಟ್ಟಿ
ಮಾಡಿ ನೀರುಳ್ಳಿ ಶೃಂಗೆಶ್ವರರ ಅಂಗಡಿಯಿಂದ ತಂದುಕೊಟ್ಟು ಹೋಗುತ್ತಿದ್ದೆ.
ಆದರೆ ಈಬಾರಿ
ಫೆಬ್ರವರಿ ಕೊನೆಯ ವಾರದಲ್ಲಿ ಶೃಂಗೇರಿಯಿಂದ ಪುರಿಗೆ ಹೊರಟ ನಾನು ರೈಲಿನಲ್ಲಿ
ವಿಮಾನದಲ್ಲಿ ನಾಲ್ಕು ನಾಲ್ಕು ಟಿಕೆಟ್
ಮಾಡಿದರೂ ಮಾರ್ಚ್ ನಲ್ಲಿ ಹೋಗಲಾಗಲಿಲ್ಲ.
ಲಾಕ್ಡೌನ್ ಘೋಷಣೇ ಆಗಿದ್ದರಿಂದ ಎಪ್ರಿಲ್ನಲ್ಲಿ ೧೫ ನೇ ತಾರೀಖಿನ ತನಕ ಮನೆಗೆ ಖಂಡಿತ ಹೋಗಲು ಆಗುವುದಿಲ್ಲ ಎನ್ನುವುದು
ಸ್ಪಷ್ಟವಾಯಿತು.
ಹಾಗಾಗಿ ಪುನಃ Air
Asia ದಲ್ಲಿ
೧೬ ನೇ ತಾರೀಖಿಗೆ ಟಿಕೆಟ್ ಬುಕ್ ಮಾಡಿದೆ. ಬಳಿಕ ಮನೆಗೆ ಹೋಗಬಹುದೆಂಬ ಭಾರೀ
ಭರವಸೆಯೊಂದಿಗೆ. ಏಕೆಂದರೆ ಪುನಃ ಲಾಕ್ ಡೌನ್ ಆಗಬಹುದೆಂಬ ಕಲ್ಪನೆ ಆರಂಭದಲ್ಲಿ ಸ್ವಲ್ಪವೂ ಕೂಡ
ಇರಲಿಲ್ಲ. ಜೊತೆಗೆ ಲಾಕ್ ಡೌನ್ ೨೧ ದಿನ ಮಾಡುವುದರಿಂದ ಅವಶ್ಯವಾಗಿ ಕೊರೋನ ನಿರ್ನಾಮವಾಗುವುದು
ಎಂಬ ನಂಬಿಕೆ ಬೇರೆ ಇತ್ತು. ಕೊರೋನ ಭಾರತದಲ್ಲಿ ಈ
ಮಟ್ಟಿಗಿನ ಉತ್ಪಾತ ಮಾಡಬಲ್ಲದು ಎಂಬ ಸುಳಿವು ಕೂಡ
ಆಗ ನನಗೆ ಇರಲಿಲ್ಲ. ಹಾಗಾಗಿ ಏಪ್ರಿಲ್ ೧೫ನೇ
ತಾರೀಖಿನ ಬಳಿಕ ಎಲ್ಲದೂ ಮೊದಲಿನಂತಾಗುವುದು ಎಂಬ ನಂಬಿಕೆಯಲ್ಲಿ ನಾನಿದ್ದೆ. ಆದರೆ ೨೫
ದಿನ ಕಾಲೇಜಿಗೆ ಹೋಗಲಿಕ್ಕೆ ಆಗದೆ, ಶೃಂಗೇರಿಗೆ ಹೋಗಲೂ ಆಗದೆ, ಯಾವುದೇ ಅಧ್ಯಯನ ಮಾಡಲೂ
ಮನಸ್ಸಿಲ್ಲದೆ, ರೂಮಿನೊಳಗೆ ಬಂಧಿಯಾಗಿ ೨೫ ದಿನ
ಕಳೆಯಬೇಕು/ಕಳೆಯುತ್ತಿದ್ದೇನೆ ಎಂಬ ಕಲ್ಪನೆಯೇ ಪ್ರತಿಕ್ಷಣ ಮೈಯೆಲ್ಲ ಹಿಂಡಿದಂತಾಗುತ್ತಿತ್ತು.
ಆ
ದೇವರು ನನಗೆ ಏನೇನು ಕೊಟ್ಟಿಲ್ಲ ? ಒಳ್ಳೆಯ ಉದ್ಯೋಗ, ಗೌರವಯುತವಾದ ಹುದ್ದೆ, ಕೈ ತುಂಬ ಸಂಬಳ,
ಸುಂದರ ಕುಟುಂಬ, ಗಟ್ಟಿಮುಟ್ಟಾದ ವಿಶಾಲ ಮನೆ, ೩ ಎಕ್ರೆ ಒಮ್ಮುಖವಾದ(ಒಪ್ಪ ಓರಣ) ಜಮೀನು, ಯಾರಿಗೂ
ಅಹಿತವನ್ನು ಬಯಸದ ಮನಸ್ಸು, ಹಿರಿಯರನ್ನು
ಗೌರವಿಸುವ ಪ್ರವೃತ್ತಿ, ಕಿರಿಯರನ್ನು ಪ್ರೀತಿಯಿಂದ ಕಾಣುವ ದೃಷ್ಟಿ, ಅಸೂಯೆಯಿಲ್ಲದ
ಮನಸ್ಸು(ಪ್ರಾಯಶಃ ಅಸೂಯೆ ಅಥವಾ ಮಾತ್ಸರ್ಯ ಅತ್ಯಂತ ವ್ಯಾಪಕವಾಗಿ ಮತ್ತು ಅಷ್ಟೇ ಗುಪ್ತವಾಗಿ
ಹೆಚ್ಚಿನ ಜನರಲ್ಲಿರುವುದನ್ನು ನೋಡಿದ್ದೇನೆ. ಅದು ಎಂತೆಂಥಾ ಅನಾಹುತವನ್ನು ಮಾಡುತ್ತದೆ
ಎಂಬುದನ್ನು ನನ್ನ ಬದುಕಿನಲ್ಲಿ ಬಹಳ ತಡವಾಗಿ ನೋಡಿ ಆಶ್ಚರ್ಯಪಟ್ಟಿದ್ದೇನೆ), ಇದ್ಯಾವುದೂ
ನನ್ನದಲ್ಲ, ಬದಲಾಗಿ ದೇವರು ಅನುಗ್ರಹಿಸಿದ್ದು. ಆದರೆ ನನಗ್ಯಾಕೆ ಈ ರೀತಿಯಾಗಿ ಅಧೀರತೆ ಕಾಡುತ್ತಿದೆ ?
ನಾನ್ಯಾಕೆ ಮಾನಸಿಕವಾಗಿ ಇಷ್ಟೆಲ್ಲ ಕುಗ್ಗಿದ್ದೇನೆ ?
ನನ್ನ
ಹಾಗೆಯೇ ಭೋಪಾಲ್ ನಲ್ಲಿ ಡಾ. ವೆಂ. ಭಟ್ಟರು, ಹಿಮಾಚಲದಲ್ಲಿ ಪ್ರೊ. ಸೋಮನಾಥ ಸಾಹುರವರು,
ಕೇರಳದಲ್ಲಿ ಪ್ರೊ.ಕಛವಾಹರು, ಹೀಗೆ ಎಷ್ಟೆಲ್ಲ ಜನ ನಮ್ಮದೇ ವಿಶ್ವವಿದ್ಯಾಲಯದಲ್ಲಿ ಕೊರೋನದ ಕಾರಣದಿಂದ ಕುಟುಂಬದಿಂದ ದೂರವಾಗಿ
ಕೆಲಸವಿಲ್ಲದೆ ಒಂಟಿತನದಿಂದ ಬಳಲುತ್ತಿದ್ದಾರೆ. ನನ್ನದೂ ಕೂಡ ಅಂತಹುದೇ ಕಥೆಯಾದರೂ ಸ್ವಲ್ಪ
ಭಿನ್ನವಾದ ಸ್ಥಿತಿ.
ಹೇಗೆಂದರೆ ನನ್ನ ಮನೆ ಪೇಟೆಯಿಂದ ೬ ಕಿ.ಮೀ. ದೂರ. ಯಾವುದೇ
ಯಾತಾಯಾತ ಸೌಕರ್ಯವಿಲ್ಲ. ಮನೆಯಲ್ಲಿ ಏನೇ ಆವಶ್ಯಕತೆಯಿದ್ದರೂ ಮನೆಯವಳು ಕಾಲ್ನಡಿಗೆಯಲ್ಲಿ ಹೋಗಿ
ತೆಗೆದುಕೊಂಡು ಬರುವಷ್ಟು ಸಲೀಸಿಲ್ಲ. ಜೊತೆಗೆ ೨
ವರ್ಷದ ಸಣ್ಣ ಮಗನನ್ನು ಎಲ್ಲೂ ಬಿಟ್ಟು ಹೋಗಲಾಗದಂತಹ ಸ್ಥಿತಿ. ಕೊಟ್ಟಿಗೆಯಲ್ಲಿ ಎರಡು ಹಾಲು
ಕರೆಯುವ ದನಗಳು, ಎರಡು ಕರುಗಳು. ಕೆಲಸದಾಕೆ ಬರಲಾಗದಂತಹ ಕೂರೋನದ ಭಯ. ಅದರಿಂದಾಗಿ ಎಲ್ಲ
ಕೆಲಸವನ್ನೂ ಮನೆಯಾಕೆಯೇ ನಿರ್ವಹಿಸಬೇಕಾದ ಸ್ಥಿತಿ. ಜೊತೆಗೆ ಅಡಿಕೆತೋಟಕ್ಕೆ ಸ್ಪ್ರಿಂಕ್ಲರ್
ಅಳವಡಿಸದೆ ಇದ್ದುದರಿಂದ ಎಲ್ಲಾ ಗಿಡಗಳಿಗೂ ಪೈಪ್ ನಿಂದಲೇ ನೀರು ಸಿಂಪಡಿಸಬೇಕಾದ ಅನಿವಾರ್ಯತೆ.
ಅದೂ ಕರೆಂಟ್ ಇದ್ದಾಗ ಮಾತ್ರ. ಎಲ್ಲಕ್ಕಿಂತ
ಮುಖ್ಯವಾಗಿ ನನ್ನ ಬರುವಿಕೆಯ ಅನಿಶ್ಚಿತತೆಯಿಂದ ಅವಳಿಗೆ ಕಾಡುತ್ತಿದ್ದ ಒಂಟಿತನ ಮುಂತಾದ ಅಸಹನೀಯ
ಭಾವಗಳ ರಾಶಿ.