ಕಳ್ಳ ಭಟ್ಟಿ ತಯಾರಿ
ನಮ್ಮ ಗುಡ್ಡೆಯಲ್ಲಿ ಹೆಚ್ಚಲ್ಲದಿದ್ದರೂ
ಸುಮಾರು ಒಂದು ಕ್ವಿಂಟಾಲ್ ಗೇರುಬೀಜವಾಗುವಷ್ಟು ಗೇರುಮರಗಳಿದ್ದವು. ಹಾಗಾಗಿ ಆ ಹಣ್ಣುಗಳನ್ನು
ಬಳಸಿಕೊಂಡು ಕಳ್ಳಭಟ್ಟಿ ತಯಾರಿಸುವ ಯೋಜನೆ ಸೂರ್ಯಣ್ಣ ಶೆಟ್ಟರದ್ದಾಗಿತ್ತು. ನಮ್ಮ ಜಮೀನಿನ ಪೂರ್ವದಲ್ಲಿ
ಮಿತ್ತಗುಮ್ಮೆಯಲ್ಲಿ ಒಂದು ಕೆರೆ ಇತ್ತು. ಅದರ ಪಕ್ಕದಲ್ಲಿಯೇ ನಾವು ಬೇಸಿಗೆಯಲ್ಲಿ ಯಾವಾಗಲೂ
ಕೊಡದಲ್ಲಿ ಅದೇ ಕೆರೆಯಿಂದ ನೀರೆತ್ತಿ ಸ್ನಾನ ಮಾಡುತ್ತಿದ್ದೆವು. ಚಳಿಗಾಲದಲ್ಲಿ ತಣ್ಣೀರು ಸ್ನಾನ
ಮಾಡಲು ಕಷ್ಟ ಅಂತ ಅಲ್ಲಿ ನಮ್ಮ ತಾಮ್ರದ ಹಂಡೆಯನ್ನು ತೆಗೆದುಕೊಂಡು ಹೋಗಿ ಬಟಾಬಯಲಿನಲ್ಲಿ ಒಂದು
ಒಲೆ ಮಾಡಿ ಅಲ್ಲೇ ಬಿಸಿನೀರು ಕಾಯಿಸಿ ಸ್ನಾನ ಮಾಡುವ ಪರಿಪಾಠಿ ಮನೆಯ ಎಲ್ಲರದ್ದೂ. ಸೂರ್ಯಣ್ಣ
ಶೆಟ್ಟರಿಗೆ ಈ ತಾಮ್ರದ ಹಂಡೆಯ ಮೆಲೆ ಕಣ್ಣು ಬಿತ್ತು. ಕಳ್ಳಭಟ್ಟಿ ತಯಾರಿಗೆ ಅದರ ಆವಶ್ಯಕತೆ
ಇತ್ತು.
ಇನ್ನೊಂದು ಹಂಡೆಯನ್ನು ಸೂರ್ಯಣ್ಣ ಶೆಟ್ರು ಖರೀದಿಸಿ ತಂದ್ರು. ಅದರಲ್ಲಿ ಗೇರು ಹಣ್ಣುಗಳನ್ನು
ತುಂಬಿಸಿ ಸ್ವಲ್ಪ ನೀರು ಬೆರೆಸಿ ೧೫ ದಿನಗಳ ಕಾಲ ಮುಚ್ಚಿ ಇಡುತ್ತಿದ್ದರು. ಗೇರುಹಣ್ಣು ಅದರಲ್ಲಿ
ಕೊಳೆತು ಹುಳಿಯಾಗಿ ಹದವಾದ ಮೇಲೆ ರಾತ್ರಿ ಹೊತ್ತು ಭಟ್ಟಿ ತಯಾರಿಸುವ ಯೋಜನೆ. ಅದಕ್ಕೆ ಶೆಟ್ರಿಗೆ
ಒಬ್ಬ ಸಹಾಯಕ ಬೇಕು. ಅವರಿಗೆ ಸುಲಭವಾಗಿ ಅದಕ್ಕೆ ಸಿಕ್ಕಿದ್ದು ಮತ್ತಾವಿನ ಹಬುರ ಗೌಡ. ಹಬುರ ಗೌಡ
ನಮ್ಮ ಮನೆಗೆ ಯಾವಾಗಲೂ ಅಡಿಕೆ ಕೊಯ್ಲಿಗೆ, ತೆಂಗಿನಕಾಯಿ ಕೊಯ್ಲಿಗೆ, ಮಳೆಗಾಲದಲ್ಲಿ ಔಷಧಿ
ಸಿಂಪರಣೆಗೆ ಬರ್ತಾ ಇದ್ದ. ತುಂಬ ಒಳ್ಳೆಯ ಮನುಷ್ಯ. ಭಟ್ಟಿ ತಯಾರಿಸಲಿಕ್ಕೆ ಶುರು ಮಾಡುವುದೇ ಆ
ದಿನದ ಹಗಲಿನ ಕೆಲಸ (ನಮ್ಮ ಮನೇದು) ಮುಗಿದ ಮೇಲೆ. ಕೆಲಸ ಮುಗಿಯುವುದು ೬.೦೦ ಗಂಟೆಗೆ. ಆ ನಂತರ ಶೆಟ್ರು
೧೫ ದಿನದ ಹಿಂದೆ ಗೌಪ್ಯವಾಗಿ ತುಂಬಿಸಿ ಇಟ್ಟ ಹಂಡೆಯಿಂದ ಬಕೆಟಿನಲ್ಲಿ ಕೊಳೆತ ಗೇರುಹಣ್ಣನ್ನು
ತಂದು ನಮ್ಮ ಸ್ನಾನದ ಹಂಡೆಗೆ ತುಂಬಿಸುತ್ತಿದ್ದ. ಸುಮಾರು
ಮುಕ್ಕಾಲು ಭಾಗದಷ್ಟು ಕೊಳೆತ ಗೆರು ಹಣ್ಣು ತುಂಬಿದ ಮೇಲೆ ಅದರ ಒಳಗೆ ಮುಳುಗದಂತೆ ಒಂದು
ಬೋಗುಣಿಯನ್ನು (ಸುಮಾರು ೫ ಲೀ ನೀರು ತುಂಬುವಷ್ಟು ದೊಡ್ಡದು) ಹಗ್ಗದ ಸಹಾಯದಿಂದ ನೇತು
ಹಾಕುತ್ತಾರೆ. ನಂತರ ಹಂಡೆಯ ಬಾಯಿಗೆ ತಾಮ್ರದ ಕಡುಬಿನ ಅಟ್ಟದ ಮುಚ್ಚಳವನ್ನು ಅಂಗಾತವಾಗಿ ಮುಚ್ಚಿ
ಇಡುತ್ತಾರೆ. ಕಡುಬಿನ ಅಟ್ಟದ ಮುಚ್ಚಳ ಮತ್ತು ಹಂಡೆಯ ಬಾಯಿಯ ನಡುವಿನ ಗ್ಯಾಪ್ ನ್ನು ಅಂಟು ಮಣ್ಣು
ಲೇಪಿಸಿ ಮುಚ್ಚುತ್ತಾರೆ. ನಂತರ ಅಂಗಾತ ಮುಚ್ಚಿದ ಕಡುಬಿನ ಅಟ್ಟದ ಮುಚ್ಚಳದ ಒಳಗೆ ನೀರನ್ನು ಸುರಿಯಲಾಗುತ್ತದೆ.
ಸುಮಾರು ೨/೩ ಗಂಟೆಗಳ ಕಾಲ ಬಲವಾದ ಬೆಂಕಿಯಲ್ಲಿ ಕೊಳೆತ ಗೇರುಹಣ್ಣನ್ನು ಕುದಿಸಲಾಗುತ್ತದೆ. ಆ
ವಧಿಯಲ್ಲಿ ಸುಮಾರು ೧೦/೧೨ ಬಾರು ಮುಚ್ಚಳದ ಮೇಲಿನ ಬಿಸಿಯಾದ ನೀರನ್ನು ತೆಗೆದು ತಣ್ಣೀರನ್ನು
ಸುರಿಯಲಾಗುತ್ತದೆ. ಆಗ ಹಂಡೆಯ ಒಳಗೆ ನೆತು ಬಿಟ್ಟ ಸ್ಟೀಲಿನ ಬೋಗುಣಿಯಲ್ಲಿ ಬಾಷ್ಪೀಕರಿಸಿದ ಕೊಳೆತ
ಗೇರುಹಣ್ಣಿ ನ ರಸ ಶೇಖರಣೆಯಾಗುತ್ತದೆ. ಅದರ ಪರಿಮಾಣ ಸುಮಾರು ೫ ಲೀ. ಸುಮಾರು ರಾತ್ರಿ ಹತ್ತು
ಗಂಟೆಗೆ ಈ ಕೆಲಸ ಮುಗಿಯುತ್ತದೆ.
ಹಬುರನಿಗೆ ಅದರಲ್ಲಿ ಪ್ರಾಯಶಃ ಎರಡು ಬಾರಿ
೯೦ ಕುಡಿಯುವ ಅವಕಾಶ. ಅವನಿಗೆ ಅದೇ ಸಂಬಳ. ಅದೇ ಇನಾಮು. ಉಳಿದ ಕಳ್ಳಭಟ್ಟಿಯನ್ನು ಬೇರೆ ಬೇರೆ ಬಾಟಲಿಗಳಿಗೆ
ತುಂಬಿಸಿ ನಮ್ಮ ಅಡಿಕೆ ತೋಟದಲ್ಲಿ ಅಲ್ಲಲ್ಲಿ ಅಡಿಕೆ ಬುಡದಲ್ಲಿ ಶೆಟ್ರು ಹುಗಿಸಿಟ್ಟಿರುತ್ತಾರೆ. ಯಾರದರೂ ಆಗಾಗ ಹಗಲಿನಲ್ಲಿ ಅವರನ್ನು
ಕೇಳಿಕೊಂಡು ಬರುವ ಗಿರಾಕಿಗಳಿಗೆ ಶ್ಟ್ರು ಅದನ್ನು ಮಾರುತ್ತಾರೆ. ಹೇಗಿದೆ ಶೆಟ್ರ ಭಟ್ಟಿ?
No comments:
Post a Comment