ನನ್ನ ಅಪ್ಪ
ನನ್ನ ಜೀವನದಲ್ಲಿ ನನಗೆ
ಅಪ್ಪನ ಸಾಂಗತ್ಯ ಕೇವಲ ಏಳು ವರುಷ. ಆದರೆ ಜೀವನಪೂರ್ತಿ ನೆನಪಿಸಿಕೊಳ್ಳುವಷ್ಟು ಆದರ್ಶಮೂರ್ತಿ
ಆಗಿದ್ದರು. ಭೌತಿಕವಾಗಿ ಸಮೃದ್ಧಿಯನ್ನು ನಾವು ಎಷ್ಟು ಹೊಂದಬೇಕು ಎನ್ನುವುದಕ್ಕಿಂತ ಸಂತುಲಿತ ಜೀವನಕ್ಕಾಗಿ
ಬೇಕಾಗುವ ವ್ಯವಸ್ಥೆಯನ್ನು ಅವರು ಮಾಡಿದ್ದರು. ಓದಿದ್ದು ಏಳನೇ ಕ್ಲಾಸಿನವರೆಗೆ ಮಾತ್ರ ಆದರೂ
ವ್ಯಾವಹಾರಿಕವಾಗಿ ಯಾವ ಶಿಕ್ಷಿತರಿಗೂ ಕಡಿಮೆ ಇಲ್ಲದಂತೆ ಬದುಕಿದವರು. ಮನೆಯ ಹಿರಿಯ ಮಗನಾಗಿ ಜವಾಬ್ದಾರಿಯನ್ನು
ಹೊತ್ತುಕೊಂಡು ತಮ್ಮಂದಿರಿಬ್ಬರಿಗೆ ಮದುವೆ ಮಾಡಿಸಿ, ಜಮೀನಿನ ವ್ಯವಸ್ಥೆ ಮಾಡಿಸಿ ಕೊಟ್ಟರು.
ಪಿತ್ರಾರ್ಜಿತವಾಗಿ ಬಂದ ಚಿನ್ನದ ಒಡವೆಗಳನ್ನು ತಮ್ಮಂದಿರಿಗೇ ಬಿಟ್ಟು, ರಾಮನನ್ನು ಆರಾಧಿಸುವ ಸಲುವಾಗಿ
ಪರಂಪರಾಗತವಾಗಿ ಬಂದ ರಾಮಟಂಕಿಯಲ್ಲಿ ಒಂದನ್ನು ಮಾತ್ರ ಪೂಜೆಗಾಗಿ ಮನೆಗೆ ತಂದವರು.
ಹಿರಿಯರು ಕಟ್ಟಿದ ಮೂಲ ಮನೆಯನ್ನು ಕಿರಿಯ ತಮ್ಮನಿಗೆ ಬಿಟ್ಟು
೧೮ ಎಕರೆಯಷ್ಟು ಜಮೀನನ್ನು ಅವನಿಗೆ ಕೊಟ್ಟು ತಾನು ೧೪ ಎಕರೆಯ ಜಮೀನಿನನ್ನು ಇಟ್ಟುಕೊಂಡು ಬೇರೆಯೇ
ಹುಲ್ಲಿನ ಮಾಡಿನ ಮನೆಯನ್ನು ಹೊಸದಾಗಿ ಕಟ್ಟಿಕೊಂಡರು. ಅದಕ್ಕೂ ಅನತಿ ಕಾಲದಲ್ಲಿ ಬೆಂಕಿ ಬಿದ್ದಾಗ
(ಇಂದಿಗೆ ೫೮ ವರ್ಷಗಳ ಹಿಂದೆ, ಅಂದರೆ ೧೯೬೬ ನೆಯ ಇಸವಿಯಲ್ಲಿ) ಇನ್ನೊಂದು ಆಗಿನ ಕಾಲಕ್ಕೆ
ಹಳ್ಳಿಯಲ್ಲಿ ಸುಸಜ್ಜಿತವೆನಿಸಿದ ಮನೆಯನ್ನು ಕಟ್ಟಿಸಿದರು. ಇನ್ನೊಬ್ಬ ತಮ್ಮ ಮುದ್ರಾಡಿಯಲ್ಲಿ ಇದ್ದ
ಪಿತ್ರಾರ್ಜಿತ ಜಮೀನನ್ನು ಹೊಂದಲು ಬಯಸದೆ, ಊರಿನಲ್ಲೇ ಕಾಡಿನ ಮಧ್ಯೆ ಪೇರಳ ಎಂಬಲ್ಲಿ ೧೨ ಎಕರೆಯ
ಜಮೀನನ್ನು ಹೊಂದಲು ಬಯಸಿದಾಗ ಸಂತೋಷವಾಗಿ ಒಪ್ಪಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು
ಮಾಡಿಸಿಕೊಟ್ಟರು.
ಊರಿಗೆ ರಸ್ತೆಯಿಲ್ಲದೆ, ವಾಹನಗಳ
ಸೌಕರ್ಯವೇ ಇಲ್ಲದಿದ್ದರೂ ೧೨ ಕಿ.ಮೀ. ದೂರದ ಹೆಬ್ರಿಯಿಂದ ಮನೆಗೆ ಬೇಕಾಗುವ ದಿನಸಿ ಇತ್ಯಾದಿಗಳನ್ನು
ಹೇಗೆ ತರುತ್ತಿದ್ದರೋ ಅರ್ಥವಾಗುವುದಿಲ್ಲ. ೧೨ ಕಿ.ಮೀ. ಕಾಲ್ನಡಿಗೆಯಲ್ಲೇ ಬರುವಾಗ ಅದೆಷ್ಟು ಭಾರವನ್ನು ಹೊತ್ತುಕೊಂಡು ಬರಬಹುದು ಅಂತ
ಊಹಿಸಿದರೆ ಆಶ್ಚರ್ಯವಾಗುತ್ತದೆ. ಈಗ ಶೃಂಗೇರಿಯಲ್ಲಿ ನನ್ನ ವಾಸ. ಅಂಗಡಿಯ ಬುಡಕ್ಕೆ ವಾಹನ
ಹೋಗುತ್ತದೆ. ಮನೆಯ ಒಳಗೆಯೇ ವಾಹನ ಬರುತ್ತದೆ. ಆದರೂ ಒಂದು ಕಾರು ಮತ್ತು ಮೂರು ದ್ವಿಚಕ್ರವಾಹನಗಳಿದ್ದರೂ
ಅಂಗಡಿಯಿಂದ ತಿಂಗಳ ಸಾಮಾನು(ದಿನಸಿ) ತರುವುದು ನನಗೆ ಸಲೀಸೇನಲ್ಲ.
ದರ್ಶನಪಾತ್ರಿ
ನಮ್ಮ ಊರಿನಲ್ಲಿ ನಮ್ಮ ಕುಟುಂಬದವರೇ
ಕಟ್ಟಿಸಿದ ದೇವಸ್ಥಾನ ಲಕ್ಷ್ಮೀನಾರಾಯಣ ದೇವಸ್ಥಾನ. ನಮ್ಮ ಕುಟುಂಬದ ಹಿರಿಯರೇ ಊರಿನ ಪಟ್ಲೇರ್(ಪಟೇಲರು)
ಆಗಿದ್ದರಿಂದ ದೇವಸ್ಥಾನ ಕಟ್ಟಿಸುವುದು ಅವರ ಜವಾಬ್ದಾರಿಯಾಗಿತ್ತು ಹಾಗೂ ಅದು ಸುಲಭವೂ ಆಗಿತ್ತು.
ನನ್ನ ತಂದೆಗೆ ಆ
ದೇವಸ್ಥಾನದಲ್ಲಿ ದರ್ಶನ ಪಾತ್ರಿಯ ಗೌರವ. ಸನ್ನಡತೆಯ ಸಾತ್ವಿಕಜೀವನ ನಡೆಸುವ ವ್ಯಕ್ತಿ ಮಾತ್ರ ಇದಕ್ಕೆ ಅರ್ಹ.
ದರ್ಶನ ಪಾತ್ರಿಯಾದವನು ದೇವಸ್ಥಾನದ ಎಲ್ಲ ಉತ್ಸವಗಳ ಸಂದರ್ಭದಲ್ಲಿಯೂ ಸಾಪ್ತಾಹಿಕ ಕಠಿನ ದೀಕ್ಷೆ(ಮಡಿಯಲ್ಲಿ
ಕೂರುವುದು) ಅನಿವಾರ್ಯ. ಆ ಸಂದರ್ಭದಲ್ಲಿ ನಿತ್ಯಕ್ಕಿಂತ ಹೆಚ್ಚುವರಿಯಾಗಿ ಅನುಷ್ಠಾನ ಮಾಡಬೇಕು. ಬೆಳಿಗ್ಗಿನ
ಜಾವದಲ್ಲಿ ಆರಂಭಿಸಿದ ಅನುಷ್ಠಾನ ಕಾರ್ಯ ಹತ್ತು ಹನ್ನೊಂದು ಗಂಟೆಯ ತನಕ ನಡೆಯುತಿತ್ತು. ನಂತರ
ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದ ನಂತರ ಮಧ್ಯಾಹ್ನದ ಊಟ. ಬೆಳಿಗ್ಗೆ ತಿಂಡಿಯಿಲ್ಲ
ರಾತ್ರಿಯ ಊಟವೂ ನಿಷಿದ್ಧ. ಈ ಸಂದರ್ಭದಲ್ಲಿ ಮನೆಗೆ ಇತರರು ಬರುವಾಗ ಮನೆಯ ಅಂಗಳಕ್ಕೂ ಚಪ್ಪಲಿಯನ್ನುಹಾಕಿಕೊಂಡು
ಬರುವುದಿಲ್ಲ. ಅಂಗಳದ ಮೂಲೆಯಲ್ಲೇ ಚಪ್ಪಲಿಯನ್ನು ಬಿಟ್ಟು ಬರುವುದನ್ನು ನಾನು ಯಾವಾಗಲೂ
ಗಮನಿಸುತ್ತಿದ್ದೆ. ಮುಂದೊಂದು ಬಾರಿ ಊರಿನ ಹಸಲರ
ಹುಡುಗನಿಗೆ ಸಂಸ್ಕೃತವನ್ನು ಕಲಿಸಿ ನಾಟಕವನ್ನು ಅಭ್ಯಾಸ ಮಾಡಿಸಿ, ಆತ ಮನೆಗೆ ಬಂದಾಗ ನಾನು ಮನೆಯ
ಒಳಗೆ ಕರೆದೆ. ನಮ್ಮ ಮನೆಯಲ್ಲಿ ಈ ರೀತಿ ಅಸ್ಪೃಶ್ಯತೆಯನ್ನು ಒಪ್ಪುವುದಿಲ್ಲ ಅಂತ ಪರಿಪರಿಯಾಗಿ
ಹೇಳಿದರೂ ಅವನು, ದರ್ಶನ ಪಾತ್ರಿಗಳ ಮನೆಯ ಒಳಗಡೆ ಹೋಗುವುದು ಸೂಕ್ತ ಅಲ್ಲ ಅಂತ ಸ್ಪಷ್ಟವಾಗಿ ಹೇಳಿ
ನಿರಾಕರಿಸಿದ.
ನನ್ನ ತಂದೆ ಯಾವತ್ತೂ ಅಸ್ಪೃಶ್ಯತೆಯನ್ನು ಮಾಡಿದವರಲ್ಲ.
ನಂತರ ನನ್ನ ಹಿರಿಯಣ್ಣ ಶಂಕರನಾರಾಯಣ ಹೆಬ್ಬಾರ್ ದರ್ಶನ ಪಾತ್ರಿಯಾದ ಮೇಲೂ, ಪೌರೋಹಿತ್ಯದಿಂದ ಸಮಯ
ಕಳೆಯುತ್ತಿದ್ದರೂ ಅಸ್ಪೃಶ್ಯತೆಯನ್ನು ಯಾವತ್ತೂ ಒಪ್ಪಿದವನಲ್ಲ. ಹಾಗಿದ್ದರೂ ಯಾರೂ ಅವನ ಜೊತೆಗೆ ಸರಿಸಮನಾಗಿ
ಕುಳಿತು ಅಥವಾ ಪಕ್ಕದಲ್ಲಿ ಕುಳಿತು ಆಹಾರಾದಿಗಳನ್ನು ಸೇವಿಸುವ ಯೋಚನೆಯನ್ನು ಕೂಡ ಮಾಡಿಲ್ಲ. ಯಾಕೆಂದರೆ
ನನ್ನ ಅಪ್ಪ ಹೋಟೇಲ್ ನಲ್ಲಿ ಯಾವತ್ತೂ ಆಹಾರ ಸೇವಿಸಿದವರಲ್ಲ. ಹೋಟೇಲಿನಲ್ಲಿ ಆಹಾರ ಸೇವಿಸಿ ಕಾರ್ಯಕ್ರಮಾದಿಗಳಲ್ಲಿ
ಕಪಟ ಮಡಿವಂತಿಕೆಯನ್ನು ಮಾಡುವ ಇತರೆ ಕೆಲವರಂತೆ ಅವರಿರಲಿಲ್ಲ.
ಗಿಡ ನೆಡುವಾಗ ನನ್ನನ್ನು
ಕರೆದುಕೊಂಡು ಹೋಗಿದ್ದರು.
ಪ್ರತಿ ಹುಣ್ಣಿಮೆಗೆ ಶ್ರೀಚಕ್ರಪೂಜೆಗಾಗಿ
ಉಡುಪಿಯ ಶ್ರೀಪತಿ ತಂತ್ರಿಗಳ ಮನೆಗೆ ಹೋಗುತ್ತಿದ್ದರು
ಪ್ರತಿದಿನ ನೈವೆದ್ಯದ ಬೆಳ್ತಿಗೆ
ಅನ್ನದ ಲಡ್ಡುಕಗಳನ್ನು ಸಣ್ಣ ಮಕ್ಕಳೆಲ್ಲರಿಗೂ ಕೊಡುತ್ತಿದ್ದರು.
ಪ್ರತಿವರ್ಷ ಚಂಡೀಹೋಮ,
ರಾಮನವಮಿ, ಆಷಾಡದಲ್ಲಿ ದುರ್ಗಾ(ಸಪ್ತಶತೀ)ಪೂಜೆ ಮಾಡಿಸಿ ನೂರಾರು ಜನರಿಗೆ ಊಟ ಹಾಕುತ್ತಿದ್ದರು. (ಈಗಲೂ
ಅವು ನಮ್ಮ ಅಣ್ಣನವರ ಉಸ್ತುವಾರಿಯಲ್ಲಿ ನಡೆಯುತ್ತವೆ.)
ಪ್ರತಿವರ್ಷ ಕೊಡಚಾದ್ರಿಗೆ
ಹೋಗಿ ಎರಡು ಮೂರು ದಿನ ಧ್ಯಾನ ಮಾಡಿ ಬರುತ್ತಿದ್ದರು.
No comments:
Post a Comment