Saturday, March 30, 2024

ಕಬ್ಬಿನಾಲೆಯ ನಮ್ಮ ಜಮೀನಿನಲ್ಲಿ ಗದ್ದೆ ಬೇಸಾಯ

ನಾನು ಸಣ್ಣವನಿದ್ದಾಗ ನಮ್ಮ ಜಮೀನಿನ ಭಾಗಗಳಾದ ದೈಕ್ ದ ಬೈಲ್, ಪೊಸಮಠ, ಬೈಲ್, ಅರುವಾರ ಗಳಲ್ಲಿ ಗದ್ದೆ ಬೇಸಾಯ ಮಾಡುತ್ತಿದ್ದರು. ಆಗ ಅಷ್ಟೂ ಗದ್ದೆಗಳಿಂದ ಭತ್ತದ ಹುಲ್ಲಿನ ಹೊರೆ  ನಮ್ಮ ಮನೆಯ ಮೇಲಿನ ಅಂಗಳದಲ್ಲಿ ರಾಶಿ ಹಾಕುತ್ತಿದ್ದರು. ರಾತ್ರಿಯ ಹೊತ್ತಿಗೆ ೭ ಗಂಟೆಯ ನಂತರ  ಗುಳೇಲಿನ ಶಶಿ, ಮಂಜು, ಮೇಲ್ಮನೆಯ ಪೊಮ್ಮಣ್ಣ, ಕೆಳಮನೆಯ ಬಾಲು, ಕುಮಾರ, ಬಾಯರಬೆಟ್ಟಿನ ಸೀತಾರಾಮ, ಮತ್ತಾವಿನ ಹಬುರ ಗೌಡ, ಬೈಲಿನ ನಾರಾಯಣ ಗೌಡ, ಕುರುಂಬಿಲು ನ ಮಕ್ಕಳಾದ ಗೋವಿಂದ,ರಾಮ, ಅಲಂಗಾಡಿನ ಸಿದ್ದು ಗೌಡನ ಮಗ ರಾಜು, ದರ್ಕಾಸಿನ ವಾಸು ಗೌಡ  ಮುಂತಾದವರು ಹುಲ್ಲು ಜಪ್ಪಲಿಕ್ಕೆ ಬರುತ್ತಿದ್ದರು. ಕುರುಂಬಿಲು ನ ಮಕ್ಕಳಾದ ಸುಶೀಲ, ರತ್ನ, ಮಜ್ಜಿಗುಡ್ಡೆಯ ಪದ್ದು, ಸುಶೀಲ, ಹಬುರ ಗೌಡನ ಹೆಂಡತಿ ಕಮಲು, ಅಲಂಗಾಡಿನ ಹಂಕರ ಗೌಡನ ಹೆಂಡತಿ, ಬೈಲ್ ನ್ ಅವಾಸುಗೌಡನ ಹೆಂಡತಿ ಯಮುನ, ಮತ್ತಾವಿನ ಹುಕ್ರ ಗೌಡನ ಹೆಂಡತಿ ಬುಕ್ಕಿ, ಶೀನ ಗೌಡನ ಮಗಳಾದ ಶಂಕರಿ, ದೋಣಿಮಾರಿನ ಅಪ್ಪಿ ಮುಂತಾದವರು ಕೊಯ್ಲಿಗೆ ಬರುತ್ತಿದ್ದರು.  ಬಂಡರಬೆಟ್ಟಿನಲ್ಲಿದ್ದ ಕುರುಂಬಿಲು ಮತ್ತವಳ ಕುಟುಂಬಕ್ಕೆ ಒಂದು ಒಕ್ಕಲು ಬೇಕು ಅಂತ ನಮ್ಮ ಮತ್ತು ಜಾರ್ನಬೆಟ್ಟಿನ ಜಮೀನಿನ ಮಧ್ಯೆ(ಪುಳಿಕ್-ದ ಬೆಟ್ಟು) ಹೊಸದಾಗಿ ನಾನು ಶಾಲೆಗೆ ಸೇರುವ ಮುಂಚೆಯೇ ಮನೆ ಕಟ್ಟಿಸಿ ಕೊಟ್ಟಿದ್ದೆವು.  ನಾನು ಆ ಮನೆಯ ಗೃಹಪ್ರವೇಶಕ್ಕೆ ಹೋದ ನೆನಪು ಈಗಲೂ ಇದೆ. ಸಂಜೆಯ ಹೊತ್ತಿಗೆ ಗೃಹಪ್ರವೇಶಕ್ಕೆ ನಮಗೆ ಕೇಸರಿಬಾತ್ ಮಾಡಿ ಬಡಿಸಿದ್ದನ್ನು ಖುಶಿಯಿಂದ ತಿಂದಿದ್ದೆ.

ಹುಲ್ಲು ಜಪ್ಪಿದ ಮೇಲೆ ನಾಲ್ಕೈದು ಮೊಟ್ಟೆ (ಕುತ್ರಿ ಅಂತ ಮಲ್ನಾಡಿನಲ್ಲಿ ಹೇಳ್ತಾರೆ) ಮಾಡುತ್ತಿದ್ದರು. ಆ ಹುಲ್ಲಿನ ಮೊಟ್ಟೆಗಳ ಸುತ್ತ ಸೆಗಣಿ ಸಾರಿಸುತ್ತಿದ್ದರು. ಬೇಸಿಗೆಯಲ್ಲಿ ನಮಗೆ ಅತ್ಯಂತ ಆನಂದದ  ಜಾಗ ಅಂದರೆ ಹುಲ್ಲಿನ ಮೊಟ್ಟೆಗಳು. ನಾವು ಅದರ ಸುತ್ತಲೂ ಸುತ್ತು ಬರುತ್ತ ಬೇರೆ ಬೇರೆ ರೀತಿಯ ಆಟ ಆಡುತ್ತಿದ್ದೆವು. ಅಲ್ಲೆ ಪಕ್ಕದಲ್ಲಿದ್ದ ಮಾವಿನ ಮರದ ಬೆಳೆದ ಮಾವುಗಳನ್ನು ಕೊಯ್ದು ಮೊಟ್ಟೆಯ ಹುಲ್ಲುಸೂಡಿಗಗಳ(ಹುಲ್ಲಿನಕಟ್ಟು) ಮಧ್ಯೆ ಹುಗಿದಿಡುತ್ತಿದ್ದೆವು. ಆನಂತರ ಒಂದೆರಡು ದಿನಗಳಲ್ಲಿ ಅವು ಹಣ್ಣಾದ ಮೇಲೆ ತಿನ್ನುತ್ತಿದ್ದೆವು.

ಆದರೆ ಈ ಆನಂದ ಬಹಳ ವರ್ಷ ಇರಲಿಲ್ಲ. ನಮ್ಮ ಅಣ್ಣಂದಿರು  ದೈಕ್ ದ ಬೈಲು ಮತ್ತು ಅರುವಾರದ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಮಾರ್ಪಡಿಸಲು ನಿರ್ಣಯಿಸಿದ್ದರು. ಅರುವಾರದಿಂದ ಹೊರೆ ತರುವುದು ತುಂಬ ಕಷ್ಟ. ಗುಡ್ಡ ಇಳಿದು ಹೋಗಿ ಮತ್ತೆ ಹತ್ತಿ ಬರುವಾಗ ಸುಸ್ತಾಗಿರುತ್ತದೆ. ಅರುವಾರ ಶಿವರಾಮಡಿಯ ಹತ್ತಿರ ಇದೆ. ಪ್ರಾಯಶಃ ಅದಕ್ಕೆ ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ಅಡಿಕೆ ಸಸಿ ನೆಟ್ಟಿದ್ದರು.

ಆ ನಂತರ ಪೊಸಮಠದ ಗದ್ದೆಗೆ ನಾನು ಒಂಭತ್ತನೆ ತರಗತಿಯಲ್ಲಿದ್ದಾಗ ಅಡಿಕೆ ಸಸಿ ನೆಟ್ಟರು. ಉಳಿದದ್ದು  ಬಾಕ್ಯಾರು ಮತ್ತು ಬೈಲು ಮಾತ್ರ.  ಬೈಲಿನಲ್ಲಿ ನಾನು ೨೦೦೮ರಲ್ಲಿ ಮದುವೆ ಯಾದ ಬಳಿಕವೂ ಪುಟ್ಟು ಗದ್ದೆ ಬೇಸಾಯ ಮಾಡುತ್ತಿದ್ದ ಆದಾಯ ಇಲ್ಲದಿದ್ದರೂ ಮಾಡದೇ ಇದರ್ಬಾರದು ಎಂಬ ಆದರ್ಶದ ಬೆನ್ನೇರಿ.  

ನಾನು ಸಣ್ಣವನಿದ್ದಾಗ ಅಂದರೆ ಸುಮಾರು ೪೦ ವರ್ಷಗಳ ಹಿಂದೆ ಒಂದು ಬಾರಿ ರಾಧಣ್ಣನ ಮನೆಯ ಮೇಲಿರುವ ( ೫೭ ವರ್ಷಗಳ ಹಿಂದೆ ಸುಟ್ಟು ಹೋದ ನಮ್ಮ ಮನೆಯ ಪಕ್ಕದಲ್ಲಿದ್ದ) ಬೆಟ್ಟ್ ಗದ್ದೆಯನ್ನು ಸ್ವತಃ ರಾಧಣ್ಣನೇ ಹೂಟೆ ಮಾಡಿದ್ದನ್ನು ನೋಡಿದ ನೆನಪಿದೆ. ಆದರೆ ಅದರಲ್ಲಿ ಆವಾಗ ಚೆನ್ನಾಗಿ ಬೆಳೆ ಬಂದಿರಲಿಲ್ಲ. ಆ ನಂತರ ಅಲ್ಲಿ ಯಾವತ್ತೂ ಗದ್ದೆ ಬೇಸಾಯ ಮಾಡಿದ ದಾಖಲೆಯಿಲ್ಲ.

ಕುರುಂಬಿಲು ಇಡೀ ದಿನ ನಮ್ಮ ಅಡತಬೆಟ್ಟುದ(ನ) ತೋಟದ ಅಡಿಕೆ ಹೆಕ್ಕಿಕೊಂಡು ಎಲೆಅಡಿಕೆ ತಿಂದೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಅವಳ ಮಕ್ಕಳಾದ ರತ್ನ ಮತ್ತು ಸುಶೀಲ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು. ಅವರಿಗೆ ಆಗ ದಿನಕ್ಕೆ ೨ ರೂಪಾಯಿ ಸಂಬಳ ಇತ್ತು. ಜೊತೆಗೆ ಒಂದು ಸೇರು ಅಕ್ಕಿ. ನಾನೇ ಸ್ವತಃ ಬಹಳ ಬಾರಿ ಅವರಿಗೆ ಕುಚ್ಚಿಲು ಅಕ್ಕಿಯನ್ನು ಸೇರಿನಲ್ಲಿ ಅಳೆದು ಕೊಟ್ಟಿದ್ದು ನೆನಪಿದೆ. ಆದರೆ ದೂರದ ಮತ್ತಾವು ಮೊಟಾದ ಕಡೆಯಿಂದ ಬಂದವರಿಗೆ ಮನೆಯಲ್ಲಿ ಮಧ್ಯಾಹ್ನದ ಊಟ ಮಡಿಸುತ್ತಿದ್ದುದರಿಂದ ಅವರಿಗೆ ೨ ರೂಪಾಯಿ ಸಂಬಳದೊಂದಿಗೆ ಕೇವಲ ೩ ಸಿದ್ದೆ ಅಕ್ಕಿ ಕೊಡುವ ಪದ್ಧತಿ ಇತ್ತು.  ಪ್ರಾಯಶಃ ಆಗ ನಾನು ೨ ನೇ ತರಗತಿಯಲ್ಲಿದ್ದೆ. ಯಾಕೆಂದರೆ ಕುರುಂಬಿಲುವಿನ ಕೊನೆಯ ಮಗಳು ಅದರ ಹಿಂದಿನ ವರ್ಷ ಒಂದನೆ ತರಗತಿಯಲ್ಲಿ ನನ್ನ ಕ್ಲಾಸ್ ಮೇಟ್ ಆಗಿದ್ದಳು. ನಂತರ ಅವಳು ಶಾಲೆಗೆ ಬರಲಿಲ್ಲ. ಪ್ರಾಯಶಃ ಆ ನಂತರ ಸುಮಾರು ಹತ್ತು ವರ್ಷ ಕುರುಂಬಿಲುವಿನ ಕುಟುಂಬ ಅಲ್ಲಿ ಇತ್ತು. ಆಮೇಲೆ ಯಾಕೊ ಏನೊ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅವರು ಮನೆ ಬಿಟ್ಟು ಮುದ್ರಾಡಿಗೆ ಹೊಗಿ ಸೆಟ್ಲ್ ಆದರು.

ಈಗ ನಾನು ಇತ್ತೀಚಿಗೆ ಅಂದರೆ ಕಳೆದ ವರ್ಷ(೨೦೨೩ ಜನವರಿ) ಮೇಲ್ಮಠ ದೇವಸ್ಥಾನ ಆವರಣದ ಕೊಡಮಣಿತ್ತಾಯ ಪರಿವಾರ ದೈವಗಳ ವಾರ್ಷಿಕ ನೇಮೊತ್ಸವಕ್ಕೆ(ಕೋಲ) ಹೋದಾಗ  ಸುಮಾರು ೩೦ ವರ್ಷಗಳ ನಂತರ ಕುರುಂಬಿಲುವಿನ ಮಗ ರಾಮನನ್ನು ನೋಡಿದೆ. ಅವನಿಗೆ(ಅವನ ಕುಟುಂಬಕ್ಕೆ) ನಮ್ಮೂರ ಜಾತ್ರೆಯಲ್ಲಿ ದೀವಟಿಗೆ ಹಿಡಿಯುವ ಜವಾಬ್ದಾರಿ ಇದೆ.  ಜಾತ್ರೆ ಗೆ ಅವನು ಯಾವಾಗಲೂ ದೀವಟಿಗೆ ಹಿಡಿಯಲು ಬರ್ತಾನೆ. ಆದರೆ ನಾನು ಜಾತ್ರೆಗೆ ಹೋಗದೆ ಬಹಳ ವರ್ಷಗಳೇ ಕಳೆದಿದ್ದವು. ಹಾಗಾಗಿ ಅವನನ್ನು ಮಧ್ಯಂತರದಲ್ಲಿ ನೋಡುವ ಅವಕಾಶ ಆಗಿರಲಿಲ್ಲ.


No comments:

Post a Comment