ಡಾ. ಎಸ್.ಎಲ್. ಭೈರಪ್ಪ - ಒಂದು ಚಿರಸ್ಮೃತಿ
ಡಾ. ಎಸ್.ಎಲ್. ಭೈರಪ್ಪ
ನವರು ದೈವಾಧೀನರಾದರೆಂದು ತಿಳಿದು ತುಂಬ ಹೃದಯ ಭಾರವಾದಂತಾಯಿತು. ನನ್ನ ಮನೆಯವಳಾದ ಅಖಿಲಾ ಹೇಳಿದಳು
ನೀವೇಕೆ ಅವರ ಬಗ್ಗೆ ನಾಲ್ಕು ಮಾತು ಬರೆದು ಹೃದಯದ ಭಾರ ಕಡಿಮೆ ಮಾಡಿಕೊಳ್ಳಬಾರದು ಅಂತ. ನನಗೆ
ಆಕೆಯ ಸಲಹೆ ಸರಿಯೆನಿಸಿ ಬರೆಯುತ್ತಿದ್ದೇನೆ.
ಊರಿನ ನಮ್ಮ ಮನೆಯಲ್ಲಿ
ನನ್ನಣ್ಣ ಸುಬ್ರಹ್ಮಣ್ಯ ಹೆಬ್ಬಾರ್ ವಸ್ತುತಃ ಭೈರಪ್ಪನವರ ಕಾದಂಬರಿಗಳಲ್ಲಿ ಒಂದಾದ “ನಾಯಿ ನೆರಳ”ನ್ನು
ನಾನು ಹೈಸ್ಕೂಲ್ ನಲ್ಲಿ ಓದುತ್ತಿರುವಾಗ ಮನೆಗೆ ತಂದಿದ್ದ. ನಾನು ಭೈರಪ್ಪನವರ ಬರಹವನ್ನು
ಇಷ್ಟಪಟ್ಟಿದ್ದೇ ಆ ಒಂದು ಕಾದಂಬರಿಯ ಮೂಲಕ. ನಮ್ಮ ಹೆಮ್ಮೆಯ ಸನಾತನ ಹಿಂದೂ ಧರ್ಮದ, ನಮ್ಮ ಭಾರತೀಯ
ಸಂಸ್ಕೃತಿಯ ಸೌಗಂಧದ ಅಸ್ವಾದ ಅಕ್ಷರಗಳಲ್ಲಿ ಶ್ರಮವಿಲ್ಲದೆ ಆಗಬೇಕಾದರೆ ಭೈರಪ್ಪನವರ
ಕಾದಂಬರಿಗಳನ್ನು ಓದಬೇಕು. ನಾಯಿ ನೆರಳನ್ನು ಓದಿ ನಮ್ಮ ಸಂನ್ಯಾಸಿಗಳ ಸಿದ್ಧಪುರುಷರ, ಯೋಗಿಗಳ,
ಬೈರಾಗಿಗಳ ಮೇಲಿನ ಸದ್ಭಾವನೆ ನೂರ್ಮಡಿಯಾಯಿತು. ನಮ್ಮ ಹಳ್ಳಿಗಳ ಜನರ ಜೀವನದಲ್ಲಿ ಹಾಸುಹೊಕ್ಕಾದ ಸರಳತೆ, ಮುಗ್ಧತೆ, ಸಹಿಷ್ಣುತೆಗಳ
ಜೊತೆಗೆ ಮಾನವಸಹಜ ಅರಿಷಡ್ವರ್ಗಗಳು ಹೇಗೆ ನಮ್ಮ ಸುಖದುಃಖಗಳನ್ನು ಕುಣಿಸುತ್ತವೆ ಎಂಬುದನ್ನು ಅವರ
ಕಾದಂಬರಿಗಳಲ್ಲಿ ಚೆನ್ನಾಗಿ ಕಾಣಬಹುದಾಗಿದೆ. ಅವರು ಬರೆಯುವ ಕಾದಂಬರಿಗಳು ನಮ್ಮ ಜೀವನಕ್ಕೆ
ಅದೆಷ್ಟು ಹತ್ತಿರವಿರುತ್ತವೆ. ಜೊತೆಗೆ ಅವರು ಯಾವುದೇ ಒಂದು ಕಾದಂಬರಿಯನ್ನು ಬರೆಯಬೇಕಿದ್ದರೆ
ಅದಕ್ಕಾಗಿ ಅವರು ಮಾಡುವ ಸುದೀರ್ಘ ಪೂರ್ವಸಿದ್ದತೆ ಅವರ ಕೃತಿಗಳ ಘನತೆಯನ್ನು ತುಂಬ
ಎತ್ತರಕ್ಕೇರಿಸುತ್ತದೆ. ಹಾಗಾಗಿಯೇ ಅವರ ಮೇಲಿನ ಗೌರವ ಕೂಡ ಅದೇ ರೀತಿ ಹೆಚ್ಚುತ್ತದೆ.
“ಪರ್ವ” ಬರೆಯುವುದಕ್ಕಿಂತ
ಮೊದಲು ಅವರು ಆರು ತಿಂಗಳುಗಳ ಕಾಲ ಮಹಾಭಾರತ ನಡೆದ ಉತ್ತರಭಾರತದ ಜಾಗಗಳನ್ನೆಲ್ಲ ಸಂದರ್ಶಿಸಿ, ಅಧ್ಯಯನ ಮಾಡಿ ಬರೆದರಂತೆ. ೬೦೦ ಪುಟಗಳ
ಪರ್ವವನ್ನು ಒಂದೇ ಉಸಿರಿನಲ್ಲಿ ಓದಿ
ಮುಗಿಸಿದ್ದೆ. ಆದರೆ ಕೊನೆಗೆ ತುಂಬ ಬೇಸರ ಆಯ್ತು ಯಾಕೆ ಗೊತ್ತ ? ೬೦೦ ಪುಟಗಳಿಗೇ ಪರ್ವವನ್ನ
ಭೈರಪ್ಪನವರು ನಿಲ್ಲಿಸಿದರಲ್ಲ/ಮುಗಿಸಿದರಲ್ಲ ಅಂತ.
“ತಬ್ಬಲಿ
ನೀನಾದೆ ಮಗನೆ”ಯ ಸವಿಯನ್ನು ಸವಿಯಲು, ವಂಶವೃಕ್ಷದ ಸೌರಭವನ್ನು ಆಘ್ರಾಣಿಸಲು, ಸಂಗೀತದ ಆಳ
ಅಗಲವನ್ನು ಪರಿಚಯಿಸುವ ಮಂದ್ರದ ಮಾಧುರ್ಯವನ್ನು ಅನುಭವಿಸಲು, ದೇಶಸೇವೆಯ ಸಂಕಲ್ಪವನ್ನು ಗಟ್ಟಿಗೊಳಿಸುವ
ಧರ್ಮಶ್ರೀಯನ್ನು ಪಡೆಯಲು, ಕಾಂಗಿಗಳು ಮತ್ತು ವಾಮಚಿಂತಕರು ಸೇರಿ ಮುಚ್ಚಿಟ್ಟ ಮುಘಲರ ಇತಿಹಾಸದ ಕರಿಪುಟಗಳನ್ನು
ಆವರಣದ ಮೂಲಕ ಅರಿಯಲು, ಸಾರ್ಥದ ಮೂಲಕ ಸನಾತನಧರ್ಮದ ಪುನರುತ್ಥಾನದ ಕಾರ್ಯವನ್ನು ಮಾಡಿದ ಭಗವತ್ಪಾದ
ಶಂಕರರ ಹೆಜ್ಜೆಗುರುತನ್ನು ಅರಿತು, ಖೂಳ ತುರುಕರ ಬರ್ಬರತೆಯ ಬರುವಿಕೆಯನ್ನು ನೋಡಿ ಎಚ್ಚರಗೊಳ್ಳಲು,
, , , , , ಭೈರಪ್ಪನವರನ್ನು ನಮಗೆ ಕರುಣಿಸಿದ ಭಗವಂತನಿಗೆ ನನ್ನ ಕೋಟಿ ನಮನಗಳು. ಅವರ ಈ ಪರಿಪೂರ್ಣ
ಸಾರಸ್ವತ ಯಾತ್ರೆ ಅವರಿಗೆ ಪರಮ ಪುರುಷಾರ್ಥವನ್ನು ಕರುಣಿಸುವಂತಾಗಲಿ ಎಂದು ಶೃಂಗೇರಿಯ ಉಭಯ ಜಗದ್ಗುರುಗಳನ್ನು
ಮತ್ತು ಜಗನ್ಮಾತೆ ಶಾರದಾಂಬೆಯನ್ನು ನಮ್ರನಾಗಿ ಬೇಡಿಕೊಳ್ಳುತ್ತೇನೆ.
ಹರಿಪ್ರಸಾದ ಕೆ.
No comments:
Post a Comment