Thursday, January 24, 2013

ನಾನೇಕೆ ಹಿಂದುವಾದೆ ? Part- I



ನಾನೇಕೆ ಹಿಂದುವಾದೆ ?   Part- I
ಡಾ|| ಕುಂವರ್ ರಫತ್ ಅಖಲಾಖ್ 
ನಾನು ನನ್ನ ಮನೆಗೆ ಮರಳಿ ಆರು ವರ್ಷಗಳು ಕಳೆದವು.  ಈಗ  ಏಳನೇ(1987) ವರ್ಷ ನಡೆಯುತ್ತಿದೆ. ಕಳೆದ   ಆರು ವರ್ಷಗಳಲ್ಲಿ  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ  ಸೌರಾಷ್ಟ್ರದಿಂದ  ಅರುಣಾಚಲಪ್ರದೇಶದವರೆಗೆ  ನಾನು ನನ್ನ ಭಾರತವನ್ನು  ಸಮೀಪದಿಂದ ನೋಡಿದೆ,  ತಿಳಿದೆ, ಅರ್ಥಮಾಡಿಕೊಂಡೆ.  ನಮ್ಮ ದೇಶದಲ್ಲಿ  ಪ್ರಚಲಿತವಿರುವ  ಅನೇಕ ರೀತಿ ರಿವಾಜುಗಳು  ಹಾಗೂ ಆಚಾರ ವಿಚಾರಗಳ  ಪರಿಚಯವಾಯಿತು. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೊಂದಿಗೆ  ಬೆರೆಯುವ  ಅವಕಾಶ  ಒದಗಿತು.  ಈ ದೇಶದ  “ಅನೇಕತೆಯಲ್ಲಿ ಏಕತೆ”ಯ  ವಾತಾವರಣವು ನನ್ನನ್ನು ರೋಮಾಂಚನಗೊಳಿಸಿತು. ಕೆಲವೆಡೆ ಉತ್ಸಾಹವನ್ನು ಶಿಥಿಲಗೊಳಿಸುವಂತಹ ಘಟನೆಗಳೂ ನಡೆದವು. ಆದರೆ ಒಂದು ವಿಶೇಷತೆ ಇದೆ ನನ್ನ ದೇಶದಲ್ಲಿ. ಅದನ್ನು ಕವಿ ಇಕ್ಬಾಲರು ಹೀಗೆ ವರ್ಣಿಸಿದ್ದಾರೆ.
ಯೂನಾನ್ ಮಿಸ್ರ್ ರೋಮನ್ ಸಬ್ ಮಿಠ್ ಗಯೇ ಜಹಾಂ ಸೇ
ಅಬ್ ತಕ್ ಮಗರ್ ಹೈ ಬಾಕಿ ನಾಮೋನಿಶಾ ಹಮಾರಾ |
ಕುಛ್  ಬಾತ್  ಹೈ  ಹಸ್ತೀ  ಮಿಠ್ತೀ  ನಹೀಂ  ಹಮಾರೀ
ಸದಿಯೋ  ರಹಾಂ  ಹೈ  ದೌರೇ    ಜಹಾಂ   ಸೇ       ||
 ಈ ಸಾಲುಗಳು ಸಮಸ್ತ ಜಗತ್ತಿಗೆ  ಓಂದು ಪ್ರೇರಣೆ. ಸುಮಾರು 2000  ಕೋಟಿ ವರ್ಷಗಳಿಂದ  ವೇದ ಸ್ಮೃತಿ, ದರ್ಶನ ಮತ್ತು  ಶಾಸ್ತ್ರಗಳ ಕಠೋರ ಹಾಗೂ  ಸರಸವಾದ  ಆಧಾರದ ಮೇಲೆ  ನನ್ನ ಭಾರತ   ಅಚಲವಾಗಿ  ದೃಢವಾಗಿ ನಿಂತಿದೆ. ಸಮಸ್ತ ಜಗತ್ತಿನ ಸ್ವರೂಪವನ್ನು  ತನ್ನಲ್ಲಿ ಸಮಾವೇಶಗೊಳಿಸಿಕೊಂಡ     ದೇಶ ಯಾವತ್ತೂ ಕೂಡಾ  ತನ್ನ ಉದಾತ್ತ ಚಿಂತನೆಗಳಲ್ಲಿ ಬದಲಾವಣೆಗಳನ್ನು  ಮಾಡಿಕೊಂಡಿಲ್ಲ.  ಈ ರಾಷ್ಟ್ರದ ಮೇಲೆ , ನಮ್ಮೀ ಸಂಸ್ಕೃತಿಯ ಮೇಲೆ  ಅದೆಷ್ಟು ಆಕ್ರಮಣಗಳಾಗಿದ್ದಾವೆಯೋ, ಅದರಿಂದಾಗಿಯೇ ಅದೆಷ್ಟು ಕಷ್ಟನಷ್ಟಗಳನ್ನನುಭವಿಸಿದ್ದೇವೆಯೋ ಅಷ್ಟು ಬೇರಿನ್ಯಾವುದೇ  ರಾಷ್ಟ್ರ   ಅನುಭವಿಸಿಲ್ಲ. ಆಕ್ರಮಣಗಳೂ ಕೂಡ  ಆಗಿಲ್ಲ.   ಅಲ್ಲೆಲ್ಲ  ಅಲ್ಲಿನ ಮೂಲಸಂಸ್ಕೃತಿಯಲ್ಲಿ  ಸಾವಿರಾರು ಬದಲಾವಣೆಗಳಾಗಿವೆ. ಭಾರತ ಮಾತ್ರ  ಅವಿಚಲವಾದ ಅಖಂಡವಾದ   ಹಿಮಾಲಯದ ಅಭಿಷೇಕ  ಮತ್ತು ಸಿಂಧುವಿನ  ನೀರರೂಪಿ ಚರಣಗಳಲ್ಲಿ ತನ್ನ ಸ್ವರೂಪದ ವರ್ಣನೆಯನ್ನು  ಅಗಣಿತ ವಿಶ್ವಪ್ರಸಿದ್ಧ ಕವಿಗಳು, ಲೇಖಕರು, ವಿದ್ವಾಂಸರು ಮೊದಲಾದವರಿಂದ ಮಾಡಿಸಿದೆ.  ಮತ್ತು ಈಗಲೂ ಸಹ  ತನ್ನ ಸಂಸ್ಕೃತಿಯ  ಪ್ರಾಚೀನತೆಯ, ಸರ್ವವ್ಯಾಪಕತ್ವದ, ಸಾರ್ವಭೌಮಿಕತೆಯ  ಮತ್ತು ಮಾನವತೆಯ ಗುಣಗಾನ ಮಾಡಿಸುತ್ತಿದೆ. ಈ ಪದ್ಧತಿಯು  ಅನಾದಿ ಕಾಲದಿಂದಲೂ ಹರಿದು ಬಂದು  ಅನಂತಕಾಲದ ತನಕ  ನಡೆಯುತ್ತಿರುತ್ತದೆ. ಇದು ಪ್ರತಿಯೊಬ್ಬ ಭಾರತೀಯನ  ಭಾವನೆಯಾಗಿದೆ. ಕೆಲವೊಮ್ಮೆ  ವೈದಿಕಸಾಮ್ರಾಜ್ಯ  ಎಂಬುದಾಗಿ  ಇನ್ಯಾವಾಗಲೋ ರಾಮರಾಜ್ಯವೆಂಬುದಾಗಿ , ಹಿಂದುಸ್ಥಾನ, ಭಾರತ,  ಇಂಡಿಯಾ ಎಂಬುದಾಗಿ , ಪುನಃ ಯಾವುದೋ ಕವಿಯ ಶಬ್ದಗಳಲ್ಲಿ
“ಯಹ್ ಚಮನ್ ಯೂಂ ಹೀ ರಹೇಗಾ  ಔರ್ ಹಜಾರೋ ಜಾನ್ವಾರ್,
ಅಪನೀ ಅಪನೀ ಬೋಲಿಯಾಂ ಸಬ್ ಬೋಲ್ಕರ್  ಉಡ್ ಜಾಯೇಂಗೇ ||   ಎಂಬುದಾಗಿ ನನ್ನ ಭಾರತ
ಹಾಡಿಸುತ್ತದೆ, ಗುಣಗಾನ ಮಾಡಿಸುತ್ತದೆ.
ಕಳೆದ 2000ಕೋಟಿ ವರ್ಷಗಳಲ್ಲಿ  ವೈದಿಕ ಸಂಸ್ಕೃತಿಯಲ್ಲಿ ಯಾವನೇ ಒಬ್ಬ ವಿದ್ವಾಂಸನಾಗಲಿ, ಕಟ್ಟರ್ ಪಂಥಿಯಾಗಲಿ, ಕೂಟನೀತಿಜ್ಞನಾಗಲಿ, ಆಕ್ರಮಣಕಾರಿಯಾಗಲಿ, ಸೇವೆಯ ಹೆಸರಿನಲ್ಲಿ ವಿಷ ಕೊಡುವವನಾಗಲಿ, ಕಟುಕನಾಗಲಿ,  ಪರಿವರ್ತನೆಯನ್ನು ಮಾಡಲು ಸಮರ್ಥನಾಗಲಿಲ್ಲ. ವೇದ  ಈಗಲೂ ಸಹ ಸಮಸ್ತ ಜಗತ್ತಿಗೆ ಸೂರ್ಯನಂತಿದೆ. ಪ್ರತಿಯೊಂದು ನವಜಾತಶಿಶುವಿಗೆ ಹೇಗೆ ತಾಯ ಮೊಲೆಹಾಲಿನ  ಅಧಿಕಾರವಿದೆಯೋ, ಹಾಗೆ ಪ್ರತಿಯೊಬ್ಬ ಮಾನವನಿಗೂ ವೇದರಾಶಿಯ ಪಠನ-ಪಾಠನ-ಶ್ರವಣಾದಿಗಳ ಮೇಲೆ ಪೂರ್ತಿ ಅಧಿಕಾರವಿದೆ. ಎಲ್ಲರನ್ನೂ ಪ್ರೀತಿಸಿ ಸಂರಕ್ಷಿಸುವ ವೇದ ತಾಯಿಯ ಹಾಗೆ.
ಜಗತ್ತಿನಲ್ಲಿ ಯಾವುದೇ ಮತ ಸಂಪ್ರದಾಯ ಅಥವಾ  ಮಜ್ಹಬ್  ತನ್ನ ಸ್ವರೂಪವನ್ನು 5000 ವರ್ಷಗಳಷ್ಟು ಕಾಲ ಜೀವಂತವಾಗಿಡಲು ಸಾಧ್ಯವಾಗಲಿಲ್ಲ.  ಇದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ನನ್ನ  ಧರ್ಮ ಇವತ್ತಿಗೂ ಕೂಡ ಕರುಣಾಮಯ ಪುತ್ರವಾತ್ಸಲ್ಯವನ್ನು  ನಿರಂತರವಾಗಿ ಹರಿಸುತ್ತಿದೆ. ಎಲ್ಲರೊಂದಿಗೆ ಸ್ನೇಹವನ್ನು ಬಂಧುತ್ವವನ್ನು ಬೆಸೆದು ಎಲ್ಲರ ಕಲ್ಯಾಣಕ್ಕಾಗಿ ಉಪದೇಶವನ್ನು ಮಾಡುತ್ತಿದೆ. ಆದ್ದರಿಂದ ಈ ವಿಷಯದಲ್ಲಿ ನನಗೇಕೆ ಹೆಮ್ಮೆಯಿರಬಾರದು ?
ಕಳೆದ ಆರು ವರ್ಷಗಳಲ್ಲಿ  ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ಬೇರೆ ಬೇರೆ ಜನಸಮುದಾಯದ ಸದಸ್ಯರು ನನ್ನ ಬಳಿಯಲ್ಲಿ ಮೇಲಿಂದ ಮೇಲೆ  “ನೀವು ಇಸ್ಲಾಂ ಮತವನ್ನು ತ್ಯಜಿಸಿ  ವೈದಿಕಧರ್ಮಾವಲಂಬಿಗಳಾದಿರಿ ಏಕೆ ?’’ ಎಂಬುದಾಗಿ ಪ್ರಶ್ನಿಸುತ್ತಿದ್ದರು. ಇಸ್ಲಾಂ ಗಿಂತ ಅಧಿಕ ಸಂಖ್ಯೆಯಿರುವ  ಸಂಪದ್ಭರಿತವಾದ ಕ್ರೈಸ್ತಮತವಿದೆ. ಆ ಬಳಿಕ ಕಮ್ಯುನಿಷ್ಟ್ ಪಂಥವಿದೆ. ನೀವು ಕ್ರೈಸ್ತೃರಾಗಬೇಕಿತ್ತು. ಅಥವಾ ಕಮ್ಯುನಿಷ್ಟರಾಗಬೇಕಿತ್ತು. ಆದರೆ ಜಗತ್ತಿನ    ಒಂದು ಸಣ್ಣ ಸಮೂಹವಾದ ಹಿಂದೂಧರ್ಮವನ್ನು ಆರಿಸಿದ್ದೀರಿ ಏಕೆ?”   ಹೀಗೆಲ್ಲಾ ಪ್ರಶ್ನೆ ಕೇಳಿದ್ದರಿಂದ ನನಗೆ ಅನಿಸುತ್ತಿತ್ತು- “ ಮಗು  ಒಂದು ಟಬ್ ನಲ್ಲಿ ಕುಳಿತು ಸ್ನಾನ ಮಾಡುವುದನ್ನು ಇಷ್ಟಪಡುತ್ತದೆ. ಆದರೆ ಈಜುಕೊಳ ಅಥವಾ ನದಿಯಲ್ಲಿ ಮೀಯುವುದರಿಂದ ಅದಕ್ಕೆ ಭಯವುಂಟಾಗಗುತ್ತದೆ.”  ನಾನು ಒಪ್ಪುತ್ತೇನೆ -ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ  ಕ್ರಿಶ್ಚಿಯನ್ನರಿದ್ದಾರೆ. ಬಳಿಕ ಮುಸ್ಲಿಮರು, ಬಳಿಕ ಕಮ್ಯುನಿಷ್ಟರು. ಆದರೆ ಕುರಿಮಂದೆಯಲ್ಲಿ ಒಂದು ಸಿಂಹ ನುಗ್ಗಿದರೆ ಆಗ ಅವುಗಳಲ್ಲಿ ಅದೆಂಥಾ ಗಾಬರಿಯುಂಟಾಗುತ್ತದೆ. ಹಾಗೆಯೇ  ಅ ಕುರಿಮಂದೆ ಹೇಗೆ ಒಡೆದು ಚೂರಾಗುತ್ತದೆ ಅಂತ ಎಲ್ಲರೂ ತಿಳಿದಿದ್ದಾರೆ. ವೈದಿಕಧರ್ಮ  ಒಂದು ವಿಶಾಲ ಸಾಗರವಿದ್ದಂತೆ. ಉಳಿದವುಗಳು ಕೊಳ ಅಥವಾ ಬಾವಿಗಳಿದ್ದಂತೆ. ಕೊಳದಲ್ಲಿ ಮುಳುಗಿ ಏಳುವುದು ತುಂಬ ಸುಲಭ. ಬಾವಿಗೆ ಹಾರುವುದಾಗಲಿ ಅದರಿಂದ ಹೊರಗೆ ಬರುವುದಾಗಲಿ ಕಷ್ಟವಲ್ಲ. ಆದರೆ ಸಾಗರದಲ್ಲಿ ಮುಳುಗಿ  ಮುತ್ತನ್ನು ಹೆಕ್ಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮುಸ್ಲಿಮರಲ್ಲಿ ಕ್ರಿಶ್ಚಿಯನ್ನರಲ್ಲಿ ಅಥವಾ ಇತರ ಸಮುದಾಯಗಳಲ್ಲಿ  ಜನಸಂಖ್ಯೆ ತುಂಬಾ ಇದೆ. ಹಣವೂ ಕೂಡ ಇದೆ.  ಆದರೆ ವೈಚಾರಿಕಸ್ವಾತಂತ್ರ್ಯದ ಹೆಸರಿನಲ್ಲಿ ಯಾವ ಅನಾಚಾರ ಅತ್ಯಾಚಾರಗಳು  ಅಲ್ಲಿ ನಡೆಯುತ್ತಿವೆಯೋ  ಅದು ಎಲ್ಲರಿಗೂ ತಿಳಿದಿದೆ.  ಆದ್ದರಿಂದ ಸ್ವತಂತ್ರವಾಗಿ  ಆಕಾಶದಲ್ಲಿ  ಹಾರಾಡುವ ಹಕ್ಕಿಯಿಂದ  ಚಿನ್ನದ ಪಂಜರದಲ್ಲಿ  ಖೈದಿಯಾಗಿ  ಉಳಿಯುವ ಇಚ್ಛೆಯನ್ನು ನಿರೀಕ್ಷಿಸುವುದು ವ್ಯರ್ಥವೇ ಸರಿ. ವೈದಿಕಧರ್ಮ ಎಂಬುದು  ಮುಕ್ತ ಆಕಾಶವಿದ್ದಂತೆ. ಇಲ್ಲಿ ನಮಗೆ ಸ್ವಚ್ಛಂದವಾಗಿ ಹಾರಾಡುವ ಸ್ವಾತಂತ್ರ್ಯವಿದೆ. ನಾನು ವೈದಿಕಧರ್ಮಕ್ಕೆ ಬರಲು ಇದೇ ಕಾರಣ. ಇದೇ ನನಗೆ ಹಿತ ಎಂಬುದಾಗಿ ಅನ್ನಿಸಿತು. ಒಬ್ಬ ಮುಲ್ಲಾ ಅಥವಾ ಪಾದ್ರಿಯ ಆಜ್ಷೆಯಿಂದ  ಒಬ್ಬ ಸುಶಿಕ್ಷಿತ ನಾಗರಿಕನೂ ಕೂಡ  ಅವಮಾನಿತನಾಗುವುದನ್ನು ನೋಡಿ ನನಗೆ ದುಃಖವಾಗುತ್ತದೆ. ಇದು ಮತದ ನಿಯಮ  ಎಂಬುದಾಗಿ ನನಗೆ ಗೊತ್ತು. ಆದರೆ ದುರಾಗ್ರಹ ಮೂಢನಂಬಿಕೆ ಕ್ಷುದ್ರತನ ಯಾವುದೇ ಧರ್ಮಕ್ಕೂ ಕೂಡ  ಕೇಡನ್ನುಂಟುಮಾಡುತ್ತದೆ. ಅದೇ ಇವತ್ತು ಎಲ್ಲ ಮತ ಪಂಥ ಸಂಪ್ರದಾಯಗಳ ಸ್ಥಿತಿಯಾಗಿದೆ,
ಆದರೂ ಸಹ ಜಗತ್ತಿನಲ್ಲಿ 5000 ವರ್ಷಗಳಷ್ಟು ಹಿಂದೆ ವೈದಿಕಸಾಮ್ರಾಜ್ಯವೇ  ಇತ್ತು. ಆಗ ಕೇವಲ ಹಿಂದುಗಳು ಮಾತ್ರ  ಜಗತ್ತಿನಲ್ಲಿದ್ದರು ಎಂಬುದನ್ನು ಎಲ್ಲರೂ ತಿಳಿದಿದ್ದಾರೆ. ಆದರೆ ಯಾವುದೋ ಕಾರಣಗಳಿಂದಾಗಿ  ಅವರಿಗೆ ಹೊಸ ಮತಗಳ ಕೋಪತಾಪಕ್ಕೆ ತುತ್ತಾಗಬೇಕಾಯಿತು. ಆದ್ದರಿಂದ ನನ್ನ ಈ ಮತಾಂತರವು   ನನ್ನ ಮನೆಗೇ ನಾನು ಮರಳಿ ಬಂದಂತಾಗಿದೆ.  ನನಗೆ ನನ್ನ ಪೂರ್ವಜರು ಮಾಡಿದ  ಪಾಪದ ಪ್ರಾಯಶ್ಚಿತ್ತವನ್ನು  ಮಾಡಬೇಕಾದ ಆವಶ್ಯಕತೆಯಿದೆ.  ಒಂದು ಮಗುವಿಗೆ ಯಾವ ಪ್ರೀತಿ ಮಮತೆ  ತನ್ನ ತಾಯಿಯ ಮಡಿಲಲ್ಲಿದ್ದಾಗ ಸಿಗುತ್ತದೆಯೋ  ಆ ಪ್ರೀತಿ ಮಮತೆ,   ಹಣ ಕೊಟ್ಟರೆ ಅಥವಾ  ಮಲತಾಯಿಯಿಂದ ಸಿಗುತ್ತದೆಂದು ನೀವು ಊಹಿಸುತ್ತೀರಾ ?
(ಮುಂದುವರಿಯುವುದು)

No comments:

Post a Comment