ಮೂಲಲೇಖಕರ ಎರಡು ಮಾತು
ಇತ್ತೀಚಿನ ದಿನಗಳಲ್ಲಿ ಧರ್ಮ ಅರ್ಥವನ್ನು ಕಳೆದುಕೊಂಡಿದೆ. ಧರ್ಮ ಮತ್ತು ಮತ ಎಂಬ ಶಬ್ದಗಳು ಒಂದೇ ಅರ್ಥದಲ್ಲಿ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಯಾವತ್ತೂ ಕೂಡ ಧರ್ಮ ಅಥವಾ ಸಮಾಜ ಇದನ್ನು ಖಂಡಿಸುವ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಳ್ಳಲಿಲ್ಲ. ಯಾವತ್ತೂ ತಿಳಿದವರಾಗಲಿ, ಬುದ್ಧಿಜೀವಿಗಳಾಗಲಿ ಇದರ ಬಗೆಗಿನ ಸ್ಪಷ್ಟೀಕರಣದ ಅವಶ್ಯಕತೆ ಇದೆ ಎಂಬುದಾಗಿ ಭಾವಿಸಲಿಲ್ಲ. ಇದರ ಮೇಲೆ ಸುದೀರ್ಘವಾದ ಚರ್ಚೆಯೇ ನಡೆಯಲಿಲ್ಲ. ಆದ್ದರಿಂದಲೇ ಧರ್ಮವು ಭೀತಿಯನ್ನುಂಟುಮಾಡುವ ವಸ್ತುವಾಗಿ ಕಾಣತೊಡಗಿತು.(ಮತವಲ್ಲ. ಏಕೆಂದರೆ ಅದು ಮೊದಲಿನಿಂದಲೂ ಅದನ್ನು ಅನುಸರಿಸದವರಲ್ಲಿ ಯಾವತ್ತೂ ಭೀತಿಯನ್ನುಂಟುಮಾಡುವುದೇ ಆಗಿದೆ.)
ಜಗತ್ತಿಗೆ ಸೂರ್ಯ ಒಬ್ಬನೇ. ಚಂದ್ರ, ಜಲ, ವಾಯು, ಪೃಥ್ವೀ, ಪರಮಾತ್ಮ ಎಲ್ಲವೂ ಒಂದೊಂದೇ. ಮತ್ತೆ ಧರ್ಮ ಹೇಗೆ ಅನೇಕವಾಗಲು ಸಾಧ್ಯ ? ಮತ, ಸಂಪ್ರದಾಯ, ಮಜ್ಹಬ್, ರಿಲಿಜನ್ ಇವೆಲ್ಲ ಮನುಷ್ಯನ ಕಲ್ಪನೆ ಮಾತ್ರ. ಆದರೆ ಧರ್ಮ ವ್ಯಕ್ತಿಯ ಜೀವನದ ವ್ಯಾವಹಾರಿಕತೆಯೊಂದಿಗೆ ಬೆರೆತ ಒಂದು ಅಧ್ಯಾಯವಾಗಿದೆ. ಹೇಗೆ ಮನುಷ್ಯ ಕಣ್ಣು ಕೈಕಾಲುಗಳಿಲ್ಲದೆ ಅಪೂರ್ಣನೆನಿಸಿಕೊಳ್ಳುತ್ತಾನೋ ಹಾಗೆ ವ್ಯಕ್ತಿ ಮತ್ತು ಸಮಾಜ ಧರ್ಮವಿಲ್ಲದಿದ್ದರೆ ಕುಂಟನಂತಾಗುತ್ತದೆ. ಇದೇ ಜಗತ್ತಿನ ಈಗಿನ ದಯನೀಯ ಸ್ಥಿತಿಗೆ ಕಾರಣ.
ಧರ್ಮ ಯಾವತ್ತೂ ಪರಿವರ್ತನೆಯನ್ನು ಹೊಂದುವುದಿಲ್ಲ. ಅದು ಅನಾದಿಕಾಲದಿಂದ ಪ್ರವಹಿಸುತ್ತಿರುವ ಎಲ್ಲರಿಗೂ ಸಮಾನವಾಗಿ ಮಾರ್ಗದರ್ಶನವನ್ನು ಮಾಡುವ ಬುದ್ಧಿಯನ್ನು ವಿಕಸಿತಗೊಳಿಸುವ ಮಾರ್ಗವಾಗಿದೆ. ಅದರ ಅನುಸರಣೆಯೇ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ.
ಡಾ|| ಆನಂದ ಸುಮನ ಸಿಂಹ
No comments:
Post a Comment