ಭಗವತ್ಸಂಕಲ್ಪ - ಭಗವದನುಗ್ರಹ
ನಮ್ಮ
ಎರಡನೇ ಕಾರಿನ ನಂಬ್ರ KA 18 MB 3040. ನಾನು ಅದನ್ನು ೨೦೨೪ ಸಪ್ಟಂಬರ್ ೫ನೇ ತಾರೀಖಿನಂದು ಖರೀದಿಸಿದೆ. ಕಾರಿನ ನಂಬ್ರ 3040 ಅಂತ ಸಿಕ್ಕಿರುವುದು ಒಂದು ಪವಾಡವೇ. ಈ fancy ನಂಬ್ರ
ದುಡ್ಡು ಸ್ವಲ್ಪ ಜಾಸ್ತಿ ಕೊಟ್ಟು ಆರ್.ಟಿ.ಓ. ದಿಂದ ಖರೀದಿಸಬಹುದು. ಸಹಜವಾಗಿ ಇಂತಹ ಸಂಖ್ಯೆಗಳು
ಸಿಗುವುದಿಲ್ಲ. ನಾನು ಈ ಸಂಖ್ಯೆಯನ್ನು ಖರೀದಿಸಿಲ್ಲ. ಸಹಜವಾಗಿ ಸಿಕ್ಕಿರುವುದೂ ಅಲ್ಲ. ಅದರ
ಹಿಂದೆ ಒಂದು ಪವಾಡವಿದೆ. ಅದೇನೆಂದರೆ -
ಒಂದೆರಡು ವರ್ಷಗಳ ಹಿಂದೆ ಸಂಸ್ಕೃತಭಾರತಿಯ ಒಬ್ಬ ನಿಷ್ಠಾವಂತ ಪೂರ್ಣಕಾಲಿಕ
ಕಾರ್ಯಕರ್ತರು ನನ್ನ ಬಳಿ ಒಂದು ಅಪೇಕ್ಷೆಯನ್ನು ವ್ಯಕ್ತಪಡಿಸಿದರು.
ಅವರು ಮೂಲತಃ ಶೃಂಗೇರಿ ಬಳಿಯ ಹಳ್ಳಿಯವರು. ಅವರಿಗೆ ಅಲ್ಲಿ ಪಿತ್ರಾರ್ಜಿತವಾದ ವಿಶಾಲವಾದ ಕೃಷಿ ಭೂಮಿಯಿದೆ. ಆದರೆ
ಅವರು ಬಾಲ್ಯದಲ್ಲಿಯೇ ಮನೆ ಬಿಟ್ಟು ಸಂಸ್ಕೃತವನ್ನೋದಿ ಜೀವನಪೂರ್ತಿ ಸಂಸ್ಕೃತದ ಸೇವೆಯನ್ನು ಮಾಡುವ
ನಿರ್ಧಾರ ಮಾಡಿದ್ದರಿಂದ ಪಿತ್ರಾರ್ಜಿತ ಜಮೀನಿನಲ್ಲಿ ತಮಗೆ ಬರಬೇಕಾದ ಹಿಸ್ಸೆಯನ್ನು ಅವರ ಅಣ್ಣಂದಿರಿಗೇ
ಬಿಟ್ಟಿದ್ದರು. ಸುಮಾರು ೩೮ ವರ್ಷಗಳಿಂದ ಸಂಸ್ಕೃತಭಾರತಿಯಲ್ಲಿ ಶ್ರದ್ಧೆಯಿಂದ ನಿಜವಾದ ಅರ್ಥದಲ್ಲಿ
ಸಂಸ್ಕೃತದ ಸೇವೆಯನ್ನು ಮಾಡುತ್ತಿರುವ ಅವರಿಗೆ ಅನಿಸಿದ್ದನ್ನು ನನ್ನ ಬಳಿ ಫೋನಿನಲ್ಲಿ ಹೇಳಿದರು –
“ಇನ್ನು ಹೆಚ್ಚು ಸಮಯ ನಾನು ಈ ಸೇವಾಕಾರ್ಯವನ್ನು ಮುಂದುವರಿಸಲಾರೆ. ಈಗಾಗಲೇ ೩೮ ವರ್ಷಗಳು ಹೀಗೆ ಕಳೆದಿವೆ.
ಕೆಲವು ವರ್ಷಗಳ ಬಳಿಕ ನಾನು ನಿವೃತ್ತಿಯನ್ನು ಹೊಂದಿ ಇಲ್ಲಿಯೇ ನಾನು ಹುಟ್ಟಿದೂರಲ್ಲಿ ಒಂದು ಚಿಕ್ಕ
ಹಂಗಿಲ್ಲದ ಮನೆಯನ್ನು ಮಾಡಿ ಶಾರದಾಂಬೆಯ ಸೇವೆಯನ್ನು ಮಾಡಿಕೊಂಡಿರಬೇಕು. ಅದಕ್ಕಾಗಿ ಎಲ್ಲಾದರೂ ಒಂದು
ಚಿಕ್ಕ ಸೈಟು ಇದ್ದರೆ ತಿಳಿಸಿ. ಇಷ್ಟು ವರ್ಷ ನನಗಾಗಿ ನಾನು ಒಂದು ರುಪಾಯಿಯನ್ನೂ ಸಂಗ್ರಹಸಿಲ್ಲ.”
ಆವತ್ತು ನಾನು ಪೂಜೆ ಮುಗಸಿ ನಿರ್ಮಾಲ್ಯವನ್ನು ತುಳಸೀಗಿಡದ ಬುಡಕ್ಕೆ
ಹಾಕಲು ಹೋಗುತ್ತಿದ್ದಾಗ ಅವರ ಫೋನ್ ಬಂದಿದ್ದಾಗಿತ್ತು. ಹಾಗಾಗಿ ನಾನು ಅವರಿಗೆ ಅಂದೆ – “ಏನೂ ಚಿಂತೆ
ಮಾಡಬೇಡಿ. ನಾನು ಈಗ ದೇವರ ಪೂಜೆ ಮಗಿಸುತ್ತಿದ್ದಂತೆ ನಿಮ್ಮ ಫೋನ್ ಬಂತು. ನನ್ನ ಬಳಿ ನೀವು ನಿಮ್ಮ
ಅಪೇಕ್ಷೆಯನ್ನು ತಿಳಿಸಿದ್ದೀರಿ. ಇನ್ನು ನಿಶ್ಚಿಂತೆಯಾಗಿರಿ. ಮುಂದಿನ ಜವಾಬ್ದಾರಿ ನನ್ನದು”
ನನ್ನ ಅಮ್ಮ ಹಿಂದೆ ದೇವರಲ್ಲಿ ಬೇಡಿಕೊಳ್ಳತ್ತಿದ್ದ ಮಾತನ್ನು ನನ್ನ
ಅಣ್ಣ ಸುಬ್ರಹ್ಮಣ್ಯ ಇತ್ತೀಚಿಗೆ ನೆನಪಸಿದ್ದ – “ನನ್ನ ಮಕ್ಳೀಗೆ ಪ್ರತಿಪಲಾಪೆಕ್ಷೆಯಿಲ್ಲದೆ ಸತ್ಪಾತ್ರರಿಗೆ
ಕೈಯೆತ್ತಿ ಕೈತುಂಬ ದಾನ ಕೊಡುವ ಸಾಮರ್ಥ್ಯವನ್ನು ಕೊಡು ದೇವರೆ”. ಪ್ರಾಯಶಃ
ಅಮ್ಮನ ಆ ಪ್ರಾರ್ಥನೆಯನ್ನು ದೇವರು ಈ ರೀತಿಯಾಗಿ ಈಡೇರಿಸುತ್ತಿದ್ದಾನೆ ಅಂತ ಅನಿಸುತ್ತಿದೆ.
ತಿಳಿದವರು ಹೇಳುವುದಿದೆ – ಬಲಗೈಯಲ್ಲಿ
ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತ. ಆದರೆ ನಾನು ಹೇಳಬೇಕೆಂದಿರುವುದು ದೈವಲೀಲೆಯನ್ನು
ತಿಳಿಸುವುದಕ್ಕೊಸ್ಕರವೇ ಹೊರತು ಕೊಟ್ಟಿರುವುದನ್ನು ಸ್ವತಃ ಕೊಂಡಾಡಿಕೊಂಡು ಬೆನ್ನುತಟ್ಟಿಕೊಳ್ಳಲು
ಖಂಡಿತ ಅಲ್ಲ.
ನಾನು ಸೈಟು ಖರೀದಿಸಿ ಮನೆ ಕಟ್ಟಿಸಿದ
ಶೃಂಗೇರಿಯ ಕನ್ಯಾಕುಮಾರಿ ಬಡಾವಣೆಯ ನಿರ್ಮಾಣಕರ್ತರಾದ ಗೋಕುಲದಾಸ ಕಾಮತರು ಭೂವ್ಯವಹಾರದಲ್ಲಿ
ಆಸಕ್ತಿಯನ್ನು ತಳೆದು ತಕ್ಕಮಟ್ಟಿಗೆ ಯಶಸ್ಸನ್ನು ಗಳಿಸಿದವರು. ಜೊತೆಗೆ ಲಾಭದ ಉದ್ದೇಶವಿಲ್ಲದೆ
ಸೇವಾಭಾವನೆಯಿಂದ ಈ ವ್ಯವಹಾರವನ್ನು ಮಾಡುವ ಪ್ರಾಯಃ ಪ್ರಪಂಚದ ಏಕೈಕ ವ್ಯಕ್ತಿ. ನಮ್ಮ
ಬಡಾವಣಿಯನ್ನು ಮಾಡುವಾಗ ನನಗೆ ಗೊತ್ತಿರುವಂತೆ ರಮೇಶ ಬೆಗಾರ್ ರಿಗೆ ೫ ಗುಂಟೆ, ಗುರುಮೂರ್ತಿಯವರ
ಸೈನ್ಸ್ ಟ್ರಷ್ಟ್ ಗೆ ಒಂದು ಸೈಟು, ಜ್ಞಾನಭಾರತಿ ಶಾಲೆಗೆಂದು ಸುಮಾರು ಒಂದೂಮುಕ್ಕಾಲು ಎಕರೆ
ಯಷ್ಟು ಜಮೀನನ್ನು ದಾನ ಮಾಡಿದವರು. ಹಾಗಾಗಿ ಸಮಾಜಸೇವೆಯನ್ನು ಕಳೆದ ೩೮ ವರ್ಷಗಳಿಂದ ಮಾಡುತ್ತಿರುವ
ಇವರಿಗೆ ಖಂಡಿತ ಕೊಡುತ್ತಾರೆ ಎಂದು ಭಾವಿಸಿ ಅವರ ಬಳಿ ವಿಷಯವನ್ನ ಪ್ರಸ್ತಾಪಿಸಿದೆ. ಅವರಿಗೆ
ಮನವರಿಕೆ ಆಯಿತಾದರೂ ಸದ್ಯ ಅವರು ಮಾಡುತ್ತಿರವ ಬಡಾವಣೆಯಲ್ಲಿ ಅಂತಹ ಅವಕಾಶವಿರಲಿಲ್ಲ. ಮುಂದಿನ
ಬಡಾವಣೆಯನ್ನು ಮಾಡುವ ಸಂದರ್ಭದಲ್ಲಿ ನೆನಪಿಸಿ. ವ್ಯವಸ್ಥೆ ಮಾಡೋಣ ಎಂದು ಹೇಳಿದ್ದರು.
ಆದರೆ ಅವರ ದುರ್ದೈವ ಏನು ಮಾಡುವುದಕ್ಕಾಗುತ್ತೆ.
ಅವರ ಹೆಂಡತಿಗೆ ಗ್ಯಾಂಗ್ರಿನ್ ಆಗಿದ್ದರಿಂದ ಒಂದು ಕಾಲು ಕತ್ತರಿಸಬೇಕಾಗಿ ಬಂತು. ಅದರ
ಪರಿಣಾಮವಾಗಿ ಅವರು ಆರು ತಿಂಗಳು ಕೊಪ್ಪದಲ್ಲಿ ಸರ್ಜರಿಗಾಗಿ, ಇನ್ನಾರು ತಿಂಗಳು ಬೆಂಗಳೂರಿನಲ್ಲಿ
ಫಿಸಿಯೋಥೆರಪಿಗಾಗಿ, ಬಳಿಕ ಅವರಿಗೂ ಹರ್ನಿಯಾ ಆಪರೇಶನ್ ಆಗಿ ಇಬ್ಬರೂ ವಾನಪ್ರಸ್ಥಾಶ್ರಮದಲ್ಲಿ
(ಈಗಲೂ) ಕಳೆಯಬೇಕಾಗಿ ಬಂತು. ಹಾಗಾಗಿ ನಾನು ಮತ್ತೆ ಅವರನ್ನು ನೆನಪಿಸುವ ಧೈರ್ಯ ಮಾಡಲಿಲ್ಲ. ಬೇರೆ
ಎಲ್ಲಾದರೂ ಯೋಚನೆ ಮಾಡೋಣ ಎಂದುಕೊಂಡಿದ್ದೆ. ಜೊತೆಗೆ ಕೆಲವಾರು ವರ್ಷಗಳ ನಂತರ ಅವರು ಇಲ್ಲಿಗೆ
ನಿವೄತ್ತ ಜೀವನಕ್ಕಾಗಿ ಬರುತ್ತೇನೆಂದು ಹೇಳಿರುವುದರಿಂದ ಸದ್ಯಕ್ಕಂತೂ ತಲೆ
ಕೆಡಿಸಿಕೊಳ್ಳಬೇಕಾಗಿಲ್ಲ ಎಂದುಕೊಂಡಿದ್ದೆ.
ಆದರೆ ೨೦೨೩ ನೆ ಇಸ್ವೀ ಜೂನ್ ತಿಂಗಳಿನಲ್ಲಿ
ಸಂಸ್ಕೃತಭಾರತಿಯ ಆ ಕಾರ್ಯಕರ್ತರ ಫೋನ್ ಬಂತು. ಅವರ ಮಾತಿನಲ್ಲೇ ಅನಿಸುತ್ತಿತ್ತು ಅವರ್ಯಾವುದೋ
ವಿಷಯವನ್ನು ತುಂಬ ಮನಸ್ಸಿನ ಆಳಕ್ಕೆಳೆದಂತಾಗಿ ಅತ್ತ ಹೇಳಲೂ ಆಗದೆ, ಹೇಳದಿರಲೂ ಆಗದೆ ತೊಂದರೆ
ಅನುಭವಿಸುತ್ತಿದ್ದರು. ನಾನು ನನಗೆ ತಿಳಿದ ಇಂಗಿತಜ್ಞತೆಯನ್ನು ಬಳಸಿ ಅವರನ್ನು ಸಂತೈಸಿ,
ಭರವಸೆಯನ್ನು ಕೊಟ್ಟು, ಕೆಲವೊಂದು ಆಯ್ಕೆಗಳನ್ನ ಅವರ ಮುಂದಿಟ್ಟೆ. ಅದೇನೆಂದರೆ – ತುರ್ತಾಗಿ
ಬೇಕಾದಲ್ಲಿ ನನ್ನ ಮನೆಯ ಬಳಿಯಲ್ಲೇ ನನ್ನ ಅಣ್ಣನಾದ ಪಾವಂಜೆ ದೇವರಾಜ ಹೆಬ್ಬಾರರ ೩೦/೪೦ ಸೈಟನ್ನು
ಖರೀದಿಸಿ ಅವರಿಗೆ ದಾನವಾಗಿ ಕೊಡುವುದು. ಅಥವಾ ಕಾಮತರ ಕಡೆಯಿಂದ ಒದಗಿಸುವುದಕ್ಕಾಗಿ ಒಂದೆರಡು
ವರ್ಷ ಕಾಯುವುದು. ಅಥವಾ ಒಂದೆರಡು ವರ್ಷದಲ್ಲಿ ನಾನೇ ಎಲ್ಲಾದರೂ ಸಣ್ಣ ಕೃಷಿಭೂಮಿಯನ್ನು ಖರೀದಿಸಿ
ಭೂಪರಿವರ್ತನೆ ಮಾಡಿ ಅವರಿಗೆ ಒಂದು ಸೈಟನ್ನು ದಾನವಾಗಿ ಕೊಡವುದು, ಆದರೆ ಅವರು ಮೊದಲನೇ
ಆಯ್ಕೆಯನ್ನು ಆರಿಸಿದರು. ಇನ್ನು ಅಣ್ಣನನ್ನು ಒಪ್ಪಿಸುವುದು ಕೆಲಸ. ಅದಕ್ಕಾಗಿ ಒಂದು ಬಾರಿ
ಪಾವಂಜೆಗೆ ರಜೆಯಲ್ಲಿ ಹೋದೆ. ಅವನ ಬಳಿಯಲ್ಲಿ
ಹೇಳಿದೆ – “ಈಗ ಈ ಬಡಾವಣೆಯಲ್ಲ ಸ್ಕ್ವೇರ್ ಫೀಟ್ ಗೆ ಸುಮಾರು ೪೦೦ ರಿಂದ ೬೦೦ ರೂಪಾಯಿ ಬೆಲೆ ಇದೆ.
ಅವರವರ ಅದೃಷ್ಟದಂತೆ ಗಿರಾಕಿ ಸಿಗುತ್ತಾರೆ. ಆದರೆ ನಾನು ಈಗ ದಾನ ಮಾಡ್ಲಿಕ್ಕೆ ಹೊರಟಿರುವುದು ೩೮
ವರ್ಷ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡಿರುವ ಒಬ್ಬ ಪ್ರಾಮಾಣಿಕ ಕಾರ್ಯಕರ್ತರಿಗೆ. ನಾವು ನಮ್ಮ
ಜೀವನದಲ್ಲಿ ಒಂದೆರಡು ದಿವಸವನ್ನೂ ಪ್ರತಿಫಲಾಪೇಕ್ಷೆಯಿಲ್ಲದೆ ಬೇರೆಯವರಿಗಾಗಿ ವ್ಯಯಿಸುವುದಿಲ್ಲ.
ಅಂಥಾದ್ದರಲ್ಲಿ ಇವರು ಬರೊಬ್ಬರಿ ೩೮ ವರ್ಷಗಳನ್ನು ಸಂಸ್ಕೃತಕ್ಕಾಗಿ ತೇಯ್ದವರು. ನಾನು ಈಗಾಗಲೇ
ಸುಮಾರು ೮೬ ಲಕ್ಷ ಸಾಲದ ಒಡೆಯ. ಹಾಗಾಗಿ ಹೆಚ್ಚೆಂದರೆ ೪.೫ ಲಕ್ಷ ಹೇಗಾದರೂ ಜೋಡಿಸಿ ಕೊಡಬಲ್ಲೆ.
ಒಂದು ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಈ ಕೆಲಸದಿಂದ ನಿನಗೂ ಪುಣ್ಯ ಪ್ರಾಪ್ತಿಯಾಗುತ್ತದೆ” ಅವನು
ಎರಡು ಮಾತಿಲ್ಲದೆ ಒಪ್ಪಿದ. ಇದು ದೈವಾನುಗ್ರಹವಲ್ಲವೇ ?
ಆ ಬಳಿಕ ನಾನು ಇದರ ಕಾಗದಪತ್ರದ ತಯಾರಿಗಾಗಿ ಶೃಂಗೇರಿಯ ಪ್ರಸಿದ್ಧ ವಕೀಲರಾದ
ಗೋಚವಳ್ಳಿ ಸತೀಶರನ್ನು ಸಂಪರ್ಕಿಸಿದೆ. ಅವರು ನನ್ನ ಅಣ್ಣನ ಸೈಟಿನ ೯/೧೧ ಮಾಡಿಸಿ, ಭೂ-ದಾನಕ್ಕಾಗಿ
ಕಾಗದಪತ್ರದ ತಯಾರಿಯನ್ನೂ ಮಾಡಿಸಿಕೊಟ್ಟರು. ಆದರೆ ಅವರು ಅದಕ್ಕಾಗಿ ಅವರಿಗೆ ಕೊಡಬೇಕಾದ ಫೀಸು
ತೆಗೆದುಕೊಳ್ಳುವುದಿಲ್ಲ ಅಂತ ಹೇಳಿದರು. ಯಾಕೆ ಅಂತ ಕೇಳಿದೆ. ಅವರು ಹೇಳಿದ್ರು – “ನೀವು ಈ
ರೀತಿಯಾಗಿ ಒಂದು ಒಳ್ಳೆಯ ಅಪರೂಪದ ಕೆಲಸ ಮಾಡುತ್ತಿದ್ದೀರಿ. ಇದಕ್ಕೆ ನಾನು ಫೀಸು ತೆಗೆದುಕೊಂಡರೆ
ಸರಿಯಾಗುವುದಿಲ್ಲ. ನನ್ನ ಕಡೆಯಿಂದ ಇದೊಂದು ಸೇವೆ ಎಂದು ತಿಳಿಯಿರಿ. ಅಂದ ಹಾಗೆ ಅವರ ಹೆಂಡತಿ
ಹಸ್ಕೂಲಿನಲ್ಲಿ ನನ್ನ ಸಹಾಧ್ಯಾಯಿನಿ ಕೂಡ. ಆ ಲೆಕ್ಕದಲ್ಲಿ ಕೂಡ ನಾನು ಫೀಸು ತೆಗೆದುಕೊಳ್ಳದಿರುವುದು
ಒಳ್ಳೇಯದೇ.” ಇಷ್ಟು ಹೇಳಿ ನನ್ನ ಅಣ್ಣನ ಸೈಟಿನ ೯/೧೧ ಮಾಡಿಸಿ, ದಾನಪತ್ರದ ಕಾಗದಪತ್ರದ ತಯಾರಿ
ಮಾಡಿ, ನೋಂದಣಿಯನ್ನು ಮಾಡಿಸಿ, ಖಾತೆಬದಲಾವಣೆಯನ್ನೂ ಸ್ವಂತ ಖರ್ಚಿನಲ್ಲಿಯೇ ಮಾಡಿಸಿ ಕೊಟ್ಟರು.
ನೋಂದಣಿ ಮಾಡಿಸುವ ಸಮಯದಲ್ಲಿ ಎಲ್ಲಾ ಕಡೆ ಅಧಕಾರಿಗಳಿಗೆ ಗುಮಾಸ್ತರಿಗೆ ಮಾಮೂಲು ಕೊಡುವ ಪದ್ಧತಿ
ಇದ್ದೇ ಇದೆ. ಆದರೆ ನಮ್ಮ ಈ ದಾನಪತ್ರದ ಸಂದರ್ಭದಲ್ಲಿ ಈ ಮಾಮೂಲಿನ ಮೊತ್ತ ಸಾಧ್ಯವಾದಷ್ಟು
ಕಡಿಮೆಯಾಗುವಂತೆ ನೋಡಿಕೊಂಡರು. ಒಳ್ಳೆಯ ಕೆಲಸಕ್ಕೆ ಹೊರಟಾಗ ಒದಗಿಬರುವ ಇಂತಹ ಪರಿಣಾಮವನ್ನೇ
ಅಲ್ಲವೆ ದೈವಲೀಲೆ ಅನ್ನುವುದು.
ನೋಂದಣಿ ಆದ
ದಿನಾಂಕ ಜನವರಿ ೨೨ – ೨೦೨೪
ಸಂಸ್ಕೃತ ಭಾರತಿಯ ಆ ಕಾರ್ಯಕರ್ತರು ನನ್ನ ಬಳಿ ಸೈಟಿನ ವಿಷಯ ಫೋನಿನಲ್ಲಿ ಪ್ರಸ್ತಾಪಿಸಿದ್ದು ಸುಮಾರು ಎರಡು ವರ್ಷಗಳ
ಹಿಂದೆ. ಅದಕ್ಕಾಗಿ ಕೆಲಸ ಆರಂಭಿಸಿದ್ದು ನೋಂದಣಿಗಿಂತ ೮ ತಿಂಗಳು ಮುಂಚೆ. ನಾನು ಪಾವಂಜೆಗೆ ಹೋಗಿ
ಅಣ್ಣನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು, ಬಳಿಕ ಲಾಯರ್ ಸತೀಶರವರನ್ನು ಭೇಟಿಯಾಗಿ ಅಣ್ಣನ ಸೈಟಿನ
೯/೧೧ ಮಾಡಿಸಲು ದಾಖಲೆಗಳನ್ನು ಒದಗಿಸಿಕೊಟ್ಟಿದ್ದು, ಪಂಚಾಯ್ತಿಯಲ್ಲಿ ಲೋಕಸಭಾ ಚುನಾವಣಾ
ಕಾರಣಕ್ಕಾಗಿ ನಾಲ್ಕು ತಿಂಗಳ ಬಳಿಕ ೯/೧೧ ಪೂರ್ಣಗೊಂಡಿದ್ದು, ಬಳಿಕ ಅಣ್ಣನಿಗೆ ಕೊಡಬೇಕಾದ
ಹಣವನ್ನು ಜೋಡಿಸಿಕೊಳ್ಳಲು ತಿಂಗಳ ಕಾಲ ಪ್ರಯತ್ನಪಟ್ಟಿದ್ದು, ನಂತರ ನೋಂದಣಿಗಾಗಿ ಅಣ್ಣನ ಮತ್ತು
ನನ್ನ ಸಮಯದ ಹೊಂದಾಣಿಕೆಗಾಗಿ ಕಾದಿದ್ದು, ಎಲ್ಲ ಸೇರಿ ನೋಂದಣಿ ಆದ
ದಿನಾಂಕ ಜನವರಿ ೨೨ – ೨೦೨೪ ಎಂದು ನಿಶ್ಚಯವಾದದ್ದು. ನಮಗೆ
ರಾಮ ಮಂದಿರ ಇದೇ ದಿನಾಂಕದಂದು ಉದ್ಘಾಟನೆಗೊಳ್ಳಲಿದೆ ಎಂಬುವ ಕಲ್ಪನೆ ಮೊದಲು ಇರಲಿಲ್ಲ. ಆದರೆ
ದೈವಲೀಲೆಯೆಂಬಂತೆ ಅದೇ ದಿನ ದಾನ ಪತ್ರದ ನೋಂದಣಿ ಆಗಿರುವುದು ನಮಗೆ ಅತ್ಯಂತ ಸಂತಸದ ವಿಷಯ.ರಾಮನ
ಅನುಗ್ರಹ ಈ ರೀತಿ ಆಗಬಲ್ಲದು ಎಂಬದು ನೆನಪಾದಾಗಲೆಲ್ಲ ನಮ್ಮನ್ನು ಸದಾ ರೋಮಾಂಚನಗೊಳಿಸುತ್ತದೆ.
ನಮ್ಮ ನೋಂದಣಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಧಾನಮಂತ್ರಿ ಮೋದೀಜಿ ರಾಮಮಂದಿರದ
ಉದ್ಘಾಟನಭಾಷಣ ಆರಂಭಿಸಿದ ಪ್ರಸಾರ ದೂರದರ್ಶನದಲ್ಲಿ ಆಗುತ್ತಿತ್ತು. ೫೦೦ ವರ್ಷಗಳ ಬಳಿಕ
ಭಾರತೀಯರಿಗೆ ಒದಗಿಬಂದ ಒಂದು ಧನ್ಯತೆಯ ಕ್ಷಣ ಅದಾದರೆ, ನಮಗೆ ಅದೇ ದಿನ ಅದೇ ಹೊತ್ತು ಇನ್ನೊಂದು
ಹಚ್ಚುವರಿಯಾಗಿ ಧನ್ಯತೆಯ ಕ್ಷಣ. ಇದಲ್ಲವೇ ದೈವಲೀಲೆ ಎನ್ನುವುದು ?
ನಾವು ಖರೀದಿಸಿ ದಾನವಾಗಿ ಕೊಟ್ಟಿರುವುದು 30/40 ಅಳತೆಯ ಸೈಟು.
ಆರು ತಿಂಗಳ ಬಳಿಕ ನಾವು ಖರೀದಿಸಿದ ಕಿಯಾ ಸೋನೆಟ್ ಕಾರಿಗೆ ಅಯಾಚಿತವಾಗಿ ಸಿಕ್ಕಿರುವುದು 3040 ನಂಬರು/ಸಂಖ್ಯೆ. ಅದೂ ಸಹ ಒಂದು ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಶಿಕ್ಷಕವೃತ್ತಿಯಲ್ಲಿರುವ ನನಗೆ ವಿಶ್ವವಿದ್ಯಾಲಯ ಶಿಕ್ಷಾ ಆಯೋಗದ
ಅಧ್ಯಕ್ಷರಾಗಿದ್ದ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕದಿವಸವನ್ನಾಗಿ ಆಚರಿಸುವ ಸೆಪ್ಟಂಬರ್
೫ ನೇ ತಾರೀಕಿನಂದು. ಇದನ್ನು ದೈವಲೀಲೆ ಎನ್ನದೆ ಇನ್ನೇನನ್ನಬೇಕು.
No comments:
Post a Comment